ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರಕಾರ ಘೋಷಿಸಿರುವ 5 ಗ್ಯಾರಂಟಿಗಳಲ್ಲಿ ಈಗಾಗಲೇ ಒಂದು ಜಾರಿಗೆ ಬಂದಿದ್ದು, ಜುಲೈ 1 ರಿಂದ ಮತ್ತೆ ಎರಡು ಗ್ಯಾರಂಟಿ (ಅನ್ನಭಾಗ್ಯ ಯೋಜನೆ ಮತ್ತು ಗೃಹಜ್ಯೋತಿ) ಯೋಜನೆಗಳನ್ನು ಜಾರಿಗೊಳಿಸುತ್ತಿದೆ.
ಈಗಾಗಲೇ ಮಹಿಳೆಯರು ಶಕ್ತಿ ಯೋಜನೆಯ ಲಾಭ ಪಡೆದಿದ್ದರು. ಈಗ ಇಂದು ಮಧ್ಯರಾತ್ರಿಯಿಂದಲೇ 200 ಯೂನಿಟ್ ಉಚಿತವಾಗಿ ನೀಡುವ ‘ಗೃಹಜ್ಯೋತಿ’ ಯೋಜನೆ ಆರಂಭವಾಗಲಿದೆ.
ಕಾಂಗ್ರೆಸ್ ಸರ್ಕಾರದ ಅಧಿಕಾರಕ್ಕೆ ಬಂದ ಕೂಡಲೇ ಜೂನ್ 12 ರಂದು ಶಕ್ತಿ ಯೋಜನೆಯನ್ನು (Shakti Scheme) ಜಾರಿಗೊಳಿಸಿ ರಾಜ್ಯಾದ್ಯಂತ ಮಹಿಳೆಯರಿಗೆ ಸರ್ಕಾರಿ ಸಾರಿಗೆ ಬಸ್ಗಳಲ್ಲಿ ಉಚಿತ ಪ್ರಯಾಣಕ್ಕೆ (Free Travel) ಅವಕಾಶ ಮಾಡಿಕೊಟ್ಟಿತ್ತು.
ಇದೀಗ ಜುಲೈ 1 ರಿಂದ ಮತ್ತೆರಡು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಇಂದು ಮಧ್ಯರಾತ್ರಿಯಿಂದಲೇ ರಾಜ್ಯಾದ್ಯಂತ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುವ “ಗೃಹಜ್ಯೋತಿ” (Gruha Jyothi Scheme) ಯೋಜನೆ ಜಾರಿಗೆ ಬರಲಿದೆ. ಉಳಿದಂತೆ ನಾಳೆ ಮಧ್ಯಾಹ್ನ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Karntaka chief minister Siddaramaiah) ಅವರು “ಅನ್ನಭಾಗ್ಯ” ಯೋಜನೆಗೆ (AnnaBhagya Scheme) ಚಾಲನೆ ನೀಡಲಿದ್ದಾರೆ.
ವಿದ್ಯುತ್ ಫ್ರೀ ಯಾರಾರಿಗೆ ?
ರಾಜ್ಯ ಸರ್ಕಾರದ ಉಚಿತ 200 ಯುನಿಟ್ ವಿದ್ಯುತ್ ಕಲ್ಪಿಸುವ ಗೃಹಜ್ಯೋತಿ ಇಂದು ಮಧ್ಯರಾತ್ರಿಯಿಂದ (ಜುಲೈ1ರ ಶನಿವಾರ ಮಧ್ಯರಾತ್ರಿ 12 ಗಂಟೆ) ಜಾರಿಯಾಗುತ್ತೆ. ಮಧ್ಯರಾತ್ರಿಯಿಂದ ಜುಲೈ 31ರವರೆಗೆ ಬಳಸುವ 200 ಯುನಿಟ್ ಒಳಗಿನ ವಿದ್ಯುತ್ಗೆ ಬಿಲ್ ಕಟ್ಟುವಂತಿಲ್ಲ. ಈಗಾಗಲೇ ಜೂನ್ 18ರಿಂದ ಗೃಹಜ್ಯೋತಿಗೆ ಅರ್ಜಿ ಆಹ್ವಾನಿಸಿದ್ದು, ಲಕ್ಷಾಂತರ ಫಲಾನುಭವಿಗಳು ನೋಂದಾಯಿಸಿಕೊಂಡಿದ್ದಾರೆ. ಈವರೆಗೆ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿದ ಪ್ರತಿಯೊಬ್ಬರೂ ಕೂಡ ಉಚಿತ ವಿದ್ಯುತ್ ಪಡೆಯಲು ಅರ್ಹರಾಗಿದ್ದಾರೆ.
81 ಲಕ್ಷ ಕುಟುಂಬದಿಂದ ನೋಂದಣಿ: ಜೂ.18ರಿಂದ ಆರಂಭವಾದ ಅರ್ಜಿ ಸಲ್ಲಿಕೆ ಪ್ರಕ್ರಿಯೆಯಿಂದ ಈವರೆಗೆ 80,99,932 ಕುಟುಂಬದಿಂದ ಅರ್ಜಿ ಹಾಕಲಾಗಿದೆ. ಒಟ್ಟಾರೆ ರಾಜ್ಯದಲ್ಲಿ 2.14 ಕೋಟಿ ಜನರು ಉಚಿತ ವಿದ್ಯುತ್ ಪಡೆಯಲು ಅರ್ಹರಾಗಿದ್ದು, 1.33 ಕೋಟಿ ಜನರು ಉಚಿತ ವಿದ್ಯುತ್ಗೆ ಅರ್ಜಿ ಸಲ್ಲಿಸಬಹುದಾಗಿದೆ. ಬೆಸ್ಕಾಂನಲ್ಲಿ 31.55 ಲಕ್ಷ, ಸೆಸ್ಕಾಂ 12.04 ಲಕ್ಷ, ಜೆಸ್ಕಾಂ 8.15 ಲಕ್ಷ ಹೆಸ್ಕಾಂ 15.99 ಲಕ್ಷ ಹಾಗೂ ಮೆಸ್ಕಾಂನಲ್ಲಿ 9.07 ಲಕ್ಷ ಜನರು ಉಚಿತ ವಿದ್ಯುತ್ ಪಡೆಯಲು ಗೃಹಜ್ಯೋತಿ ಯೋಜನೆಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಉಳಿದಂತೆ HRECSನಲ್ಲಿ 36,906 ಮಂದಿ ನೋಂದಣಿ ಮಾಡಿಸಿಕೊಂಡಿದ್ದಾರೆ.
ನಾಳೆ ಅನ್ನಭಾಗ್ಯ ಯೋಜನೆ ಜಾರಿ:
ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ (ಜು.1)ರಿಂದ ಅನ್ನಭಾಗ್ಯ ಯೋಜನೆ (10 ಕೆಜಿ ಅಕ್ಕಿ ವಿತರಣೆ) ಜಾರಿ ಮಾಡಲಿದ್ದಾರೆ. ಈ ಯೋಜನೆಯಡಿ ಎಲ್ಲ ಪಡಿತರ ಚೀಟಿಯ ಫಲಾನುಭವಿಗಳಿಗೆ ಜುಲೈ ತಿಂಗಳು 5 ಕೆ.ಜಿ. ಅಕ್ಕಿ ಹಾಗೂ ಬಾಕಿ 5 ಕೆ.ಜಿಗೆ ತಲಾ 34 ರೂ.ಗಳಂತೆ 170 ರೂ. ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತದೆ. ಆದರೆ, ಸುಮಾರು 6 ಲಕ್ಷಕ್ಕೂ ಅಧಿಕ ಪಡಿತರ ಕುಟುಂಬಗಳಿಗೆ ಬ್ಯಾಂಕ್ ಖಾತೆಯೇ ಇಲ್ಲವಾಗಿದ್ದು, ಅಂಥವರಿಗೆ ಯಾವ ರೀತಿ ಹಣವನ್ನು ಹಾಕಬೇಕು ಎಂಬುದು ಸರ್ಕಾರಕ್ಕೆ ಗೊಂದಲವಾಗಿದೆ.