ಹೊಸದಿಗಂತ ಡಿಜಿಟಲ್ ಡೆಸ್ಕ್:
2022ರ ಗುಜರಾತ್ ಗಲಭೆ ಪ್ರಕರಣ ಸಂಬಂಧಿಸಿದಂತೆ ಮುಂಬೈ ಮೂಲದ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಜಾಮೀನು ಅರ್ಜಿಯನ್ನು ಗುಜರಾತ್ ಹೈಕೋರ್ಟ್ ತಿರಸ್ಕರಿಸಿದೆ.
2002 ರ ಗೋಧ್ರಾ ನಂತರದ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಸೆಟಲ್ವಾಡ್ ಮಾಡಿರುವ ಸಾಕ್ಷ್ಯಾಧಾರ ರಹಿತ ಆರೋಪಕ್ಕೆ ಸಂಬಂಧಿಸಿದ್ದಾಗಿದೆ. ಸೆಟಲ್ವಾಡ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಿರ್ಜಾರ್ ದೇಸಾಯಿ ಅವರ ಪೀಠವು ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದು, ಜತೆಗೆ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿದೆ. ತಕ್ಷಣವೇ ಶರಣಾಗುವಂತೆ ಸೂಚನೆ ನೀಡಿದೆ.
2002ರ ಗುಜರಾತ್ ಗಲಭೆಗೆ ಸಂಬಂಧಿಸಿ ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ವಿಶೇಷ ತನಿಖಾ ತಂಡ ನೀಡಿದ್ದ ಕ್ಲೀನ್ ಚಿಟ್ ಅನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿತ್ತು. ನಂತರ ತೀಸ್ತಾ ಅವರ ಬಂಧನವಾಗಿತ್ತು. 2022ರ ಸೆಪ್ಟೆಂರ್ 22ರಂದು ಅವರಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು.
2002 ರ ಗುಜರಾತ್ ಗಲಭೆ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ (ಅಂದಿನ ಗುಜರಾತ್ ಮುಖ್ಯಮಂತ್ರಿ) ಮತ್ತು ಇತರರ ವಿರುದ್ಧ ನಕಲಿ ಸಾಕ್ಷ್ಯಾಧಾರ ಸೃಷ್ಟಿಸಿದ ಆರೋಪ ತೀಸ್ತಾ ಮೇಲಿದೆ.
ಸೆಟಲ್ವಾಡ್ ವಿರುದ್ಧದ ಆರೋಪಗಳು ಸುಳ್ಳು ಸಾಕ್ಷ್ಯಗಳ ಸೃಷ್ಟಿಗೆ ಸಂಬಂಧಿಸಿದೆ. ಹೀಗಾಗಿ ಅವರಿಗೆ ಜಾಮೀನು ಮಂಜೂರು ಮಾಡಬಾರದು. ಅವರ ಮನವಿಯನ್ನು ಪುರಸ್ಕರಿಸಬಾರದು ಎಂದು ರಾಜ್ಯ ಸರ್ಕಾರದ ಪರ ವಕೀಲರು ಜೂನ್ 15ರಂದು ಹೈಕೋರ್ಟ್ನಲ್ಲಿ ವಾದ ಮಂಡಿಸಿದ್ದರು.
ಕಳೆದ ವರ್ಷ ಜೂನ್ 25 ರಂದು ಗುಜರಾತ್ ಪೊಲೀಸರು ಸಹ ಆರೋಪಿ ಮಾಜಿ ಐಪಿಎಸ್ ಅಧಿಕಾರಿ ಆರ್ಬಿ ಶ್ರೀಕುಮಾರ್ ಜೊತೆಗೆ ಸೆಟಲ್ವಾಡ್ ಅವರನ್ನು ಬಂಧಿಸಿದ್ದರು. 2002 ರ ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ಅಮಾಯಕ ವ್ಯಕ್ತಿಗಳನ್ನು ತಪ್ಪಾಗಿ ಸಿಲುಕಿಸಲು ಸಂಚು ರೂಪಿಸಿದ ಆರೋಪದ ಬಗ್ಗೆ ಅಹಮದಾಬಾದ್ ಡಿಟೆಕ್ಷನ್ ಆಫ್ ಕ್ರೈಮ್ ಬ್ರಾಂಚ್ (ಡಿಸಿಬಿ) ದಾಖಲಿಸಿದ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ನಂತರ ಈ ಬಂಧನವಾಗಿತ್ತು.
ಏಳು ದಿನಗಳ ಪೊಲೀಸ್ ಕಸ್ಟಡಿ ನಂತರ, ಜುಲೈ 2 ರಂದು ಸೆಟಲ್ವಾಡ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು. ವಿಶೇಷ ತನಿಖಾ ತಂಡವು (ಎಸ್‌ಐಟಿ) ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಇತರರಿಗೆ ಕ್ಲೀನ್ ಚಿಟ್ ನೀಡಿರುವುದನ್ನು ಪ್ರಶ್ನಿಸಿ ಝಕಿಯಾ ಜಾಫ್ರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ ಒಂದು ದಿನದ ನಂತರ ಸೆಟಲ್ವಾಡ್ ಬಂಧನವಾಗಿತ್ತು.