ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ಮಾರಣಾಂತಿಕ ರೈಲು ಅಪಘಾತದಲ್ಲಿ ಸಾವನ್ನಪ್ಪಿದ 13 ಪ್ರಯಾಣಿಕರ ಮೃತದೇಹಗಳನ್ನು ಶನಿವಾರ ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಯಿತು. ಮೃತದೇಹಗಳನ್ನು ಭುವನೇಶ್ವರದ ಏಮ್ಸ್ ನಲ್ಲಿ ಇರಿಸಲಾಗಿತ್ತು. ಡಿಎನ್‌ಎ ಪರೀಕ್ಷೆಯ ಸಹಾಯದಿಂದ 29 ಮೃತದೇಹಗಳನ್ನು ಗುರುತಿಸಲಾಗಿದ್ದು, ಶುಕ್ರವಾರ ಆರು ಮತ್ತು ಶನಿವಾರ 13 ಮೃತದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.
ಡಿಎನ್‌ಎ ಪರೀಕ್ಷೆಯ ಫಲಿತಾಂಶಗಳ ಆಧಾರದ ಮೇಲೆ, ಏಮ್ಸ್ ಭುವನೇಶ್ವರ್, ಭುವನೇಶ್ವರ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ), ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ನಡುವಿನ ಸಮನ್ವಯದ ಮೂಲಕ ಬಾಲಸೋರ್ ರೈಲು ಅಪಘಾತದಲ್ಲಿ ಸಾವನ್ನಪ್ಪಿದ ಇನ್ನೂ 13 ಪ್ರಯಾಣಿಕರ ಶವಗಳನ್ನು ಹಸ್ತಾಂತರಿಸಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಈ 13 ಮೃತದೇಹಗಳ ಪೈಕಿ ನಾಲ್ಕು ಬಿಹಾರಕ್ಕೆ, ಎಂಟು ಮೃತದೇಹಗಳನ್ನು ಪಶ್ಚಿಮ ಬಂಗಾಳಕ್ಕೆ ಮತ್ತು ಒಂದು ಮೃತದೇಹವನ್ನು ಜಾರ್ಖಂಡ್‌ಗೆ ಕಳುಹಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
62 ಮೃತದೇಹಗಳನ್ನು ಇನ್ನೂ ಗುರುತಿಸಬೇಕಿದೆ
ಭುವನೇಶ್ವರದ ಏಮ್ಸ್‌ನಲ್ಲಿ ಇರಿಸಲಾಗಿರುವ 62 ಮೃತ ದೇಹಗಳನ್ನು ಇನ್ನೂ ಗುರುತಿಸಬೇಕಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಭುವನೇಶ್ವರದಲ್ಲಿರುವ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS) ಉಳಿದ ಮೃತದೇಹಗಳನ್ನು ಗುರುತಿಸಲು ಸಂಬಂಧಿಕರನ್ನು DNA ಮಾದರಿಗಳನ್ನು ತೆಗೆದುಕೊಳ್ಳುತ್ತಿದೆ. ಡಿಎನ್‌ಎ ಹೊಂದಾಣಿಕೆಯ ಪ್ರಕಾರ, ಮೃತ ದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗುತ್ತದೆ.