ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಘೋಷಿಸಿರುವ ಗ್ಯಾರಂಟಿ ಯೋಜನೆಗಳಿಗೆ ಹಾಕಿದ ಷರತ್ತುಗಳನ್ನು ವಾಪಸ್ ಪಡೆಯುವಂತೆ ಸದನದ ಒಳಗೆ ಹಾಗೂ ಹೊರಗೆ ಪ್ರತಿಭಟನೆ ಮಾಡಲು ಬಿಜೆಪಿ ತೀರ್ಮಾನಿಸಿದೆ. ಮೋಸ ನಿಲ್ಲಿಸಿ ಗ್ಯಾರಂಟಿ ಜಾರಿಗೊಳಿಸಿ ಶೀರ್ಷಿಕೆಯಡಿ ಹೋರಾಟ ಮಾಡುತ್ತೇವೆಂದು ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಅರ್ಜಿ ಹಾಕುವ ಪರಿಸ್ಥಿತಿ ನಮ್ಮಲ್ಲಿ ಇಲ್ಲ. ಶೀಘ್ರದಲ್ಲೇ ನಾಯಕನ ಆಯ್ಕೆ ಆಗುವುದು. ಪಕ್ಷ ನನಗೆ ಯಾವುದೇ ಜವಾಬ್ದಾರಿ ನೀಡಿದರೂ ಅದನ್ನು ನಿಭಾಯಿಸಲು ಸಿದ್ಧನಿದ್ದೇನೆ ಎಂದರು.
ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಕಾರ್ಯಗತವಾಗಿಲ್ಲ. ಜನರ ಮತ ಪಡೆದು ಕಾಂಗ್ರೆಸ್ನವರು ಮಾತು ತಪ್ಪಿದ್ದಾರೆ. ಹೀಗಾಗಿ ಬಿಜೆಪಿ ಸದನದ ಒಳಗೆ ಮತ್ತು ಹೊರಗಡೆ ಹೋರಾಟ ಮಾಡಲಿದೆ. ಸದನದ ಹೊರಗಡೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಜುಲೈ.4ರಂದು ಫ್ರೀಡಂಪಾರ್ಕ್ನಲ್ಲಿ ಹೋರಾಟ ಮಾಡಲಿದ್ದಾರೆ ಎಂದು ಹೇಳಿದರು.
ಯಾವುದೇ ಷರತ್ತುಗಳಿಲ್ಲದೆ ಗ್ಯಾರಂಟಿ ಕೊಡುತ್ತೇವೆ ಎಂದು ಹೇಳಿದ್ದರು. ಇವತ್ತು ಅದನ್ನ ಕೊಡದೇ ಮುಂದಕ್ಕೆ ಹಾಕ್ತಿದ್ದಾರೆ. 10 ಕೆಜಿ ಅಕ್ಕಿಕೊಡುತ್ತೇನೆ ಅಂದಿದ್ದರು. ಈಗ 5 kgಗೆ ಬಂದಿದ್ದಾರೆ. ಈಗ ಹಣ ಕೊಡೋಕೆ ಮುಂದಾಗಿದ್ದಾರೆ. ಒಂದು ತಲೆಗೆ 10 kg ಅಕ್ಕಿ ಕೊಡಲೇಬೇಕು ಎಂದು ಆಗ್ರಹಿಸಿದ್ದಾರೆ.
ಯುವನಿಧಿ ಯೋಜನೆ ಬಗ್ಗೆ ಬಹುತೇಕ ಗೊಂದಲ ಇದೆ. ಎಲ್ಲಾ ನಿರುದ್ಯೋಗಿಗಳಿಗೆ 3000 ರೂ. ಹಣ ನೀಡಬೇಕು. ಶಕ್ತಿ ಯೊಜನೆಯಿಂದ ಬಸ್ ಗಳ ಕೊರತೆ ಉಂಟಾಗಿದೆ. ನಡು ರಸ್ತೆಯಲ್ಲಿಯೇ ಬಸ್ ಗಳು ಕೆಟ್ಟು ನಿಲ್ಲುತ್ತಿವೆ. ಅಲ್ಲದೇ ಶಕ್ತಿ ಯೊಜನೆಯಿಂದ ಆಟೋ ಚಾಲಕರ ಪರಿಸ್ಥಿತಿ ಹದಗೆಟ್ಟಿದೆ. ಪ್ರತಿ ಮನೆಗೂ 209 ಯುನಿಟ್ವಿದ್ಯುತ್ ಕೊಡಬೇಕು. ಎಲ್ಲರೂ ಕರೆಂಟ್ ಸ್ಟೌವ್ ಕೊಂಡುಕೊಂಡಿದ್ದಾರೆ. ಪ್ರತಿಯೊಬ್ಬ ಮಹಿಳೆಗೂ 2 ಸಾವಿರ ಅಂತಾ ಪ್ರಿಯಾಂಕ ಗಾಂಧಿ ಘೋಷಿಸಿದ್ರು, ಅದರಂತೆ ಪ್ರತಿಯೊಬ್ಬ ಮಹಿಳೆಗೂ ಕೊಡಬೇಕು.
ಮೋಸ ನಿಲ್ಲಿಸಿ ಗ್ಯಾರಂಟಿ ಜಾರಿಗೊಳಿಸಿ ಶೀರ್ಷಿಕೆಯಡಿ ಹೋರಾಟ ಮಾಡುತ್ತೇವೆಂದು ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ.