ಹೊಸದಿಗಂತ ಡಿಜಿಟಲ್ ಡೆಸ್ಕ್:
ನಮಗೊಂದು ಮನೆ ಬೇಕು…ಅದು ಸುಂದರವಾಗಿರಬೇಕು…ಎಲ್ಲಾ ಸೌಲಭ್ಯಗಳಿರಬೇಕು. ಆಕರ್ಷಕವಾಗಿಬರೇಕು ಹೀಗೆಲ್ಲಾ ಕನಸು ಕಾಣುತ್ತೇವೆ. ಮನೆ ಸುಂದರವಾಗಿರಬೇಕೆಂದರೆ ಅದರ ವ್ಯವಸ್ಥೆಗಳಷ್ಟೇ ಸುಣ್ಣ ಬಣ್ಣಕ್ಕೂ ಪ್ರಾಧಾನ್ಯತೆಯಿದೆ.
ನೋಡುವಾಗಲೇ ಎಲ್ಲರನ್ನು ಆಕರ್ಷಿಸುವ ಮಾದರಿಯಲ್ಲಿ ಮನೆಯ ವಿನ್ಯಾಸವಿದ್ದರೆ ಅದಕ್ಕೊಪ್ಪುವ ಸುಂದರ ಬಣ್ಣಗಳು ಇರುವುದು ಕೂಡಾ ಅಷ್ಟೇ ಮುಖ್ಯ. ವಾತಾವರಣದಲ್ಲಾಗುವ ಬದಲಾವಣೆಗಳು, ಮಳೆಗಾಳ, ಬಿಸಿಲು, ಚಳಿಗಾಲದಲ್ಲಿ ಬಣ್ಣ ಮಸುಕಾಗದಂತೆ ಕಾಪಾಡಿಕೊಳ್ಳುವುದು ಕೂಡಾ ಅತೀ ಅಗತ್ಯ. ಮಳೆಗಾಲದಲ್ಲಿ ಮನೆಯ ಒಳ ಹೊರಭಾಗದ ಬಣ್ಣಗಳನ್ನು ರಕ್ಷಿಸಿಕೊಳ್ಳುವುದು ಹೇಗೆ ನೋಡೋಣ.
ಮಳೆ ಆರಂಭಕ್ಕೂ ಮೊದಲೇ ಗೋಡೆಗಳಲ್ಲಿ ಬಿರುಕಿದೆಯೇ, ಅಥವಾ ಬಣ್ಣ ಸುಲಿಯುತ್ತಿದೆಯೋ ಎಂಬುದನ್ನು ನಿಯಮಿತವಾಗಿ ಪರೀಕ್ಷಿಸಿ. ಒಂದೊಮ್ಮೆ ಅಂತಹ ಸಮಸ್ಯೆಗಳಿದ್ದದ್ದೇ ಆದಲ್ಲಿ ಅದಕ್ಕೆ ಬೇಕಾದ ಪರಿಹಾರವನ್ನು ಮಾಡಿಕೊಳ್ಳಿ. ಗೋಡೆಯ ಮೇಲ್ಮೈಯಲ್ಲಿ ಇರುವ ಧೂಳು, ಕೊಳಕು ಇದ್ದರೆ ಮೊದಲು ಅದನ್ನು ಸ್ವಚ್ಚಮಾಡಿಕೊಳ್ಳಲೇಬೇಕು. ಇಲ್ಲದಿದ್ದರೆ ಅವುಗಳಲ್ಲಿ ತೇವಾಂಶ ಸಂಗ್ರಹವಾಗಿ, ಶಿಲೀಂದ್ರಗಳು ಉತ್ಪತ್ತಿಯಾಗಿ ಗೋಡೆಗಳು ಬಣ್ಣಗಳು ಹಾಳಾಗುವ ಸಾಧ್ಯತೆಯಿರುತ್ತವೆ. ಗೋಡೆಗಳಿಗೆ ಜಲನಿರೋಧಕ ಪದರಗಳನ್ನು ಬಳಸುವುದು ಉತ್ತಮ. ಇದರಿಂದ ತೇವಾಂಶದಿಂದ ಬಣ್ಣ ಮಾಸುವುದನ್ನು ತಡೆಯಲು ಸಾಧ್ಯವಿದೆ. ಗೋಡೆಗಳಲ್ಲಿ ತೇವಾಂಶ ಸಂಗ್ರಹವಾಗದಂತೆ ನೋಡಿಕೊಳ್ಳುವುದು ತುಂಬಾ ಅಗತ್ಯ. ತೇವಾಂಶ ಇದ್ದರೆ ಅದು ನಿಧಾನವಾಗಿ ಬಣ್ಣ ಮಾಸಲು ಸಹಕಾರಿಯಾಗುತ್ತದೆ. ಹಾಗಾಗಿ ತೇವಾಂಶ ಇಲ್ಲದಂತೆ ನೋಡಿಕೊಳ್ಳುವುದು ಅತೀ ಅಗತ್ಯ.