ಹೊಸದಿಗಂತ ಡಿಜಿಟಲ್ ಡೆಸ್ಕ್:
ಈಶಾನ್ಯ ರಾಜ್ಯಗಳಲ್ಲಿ ಅಕ್ರಮ ಮಾದಕ ವಸ್ತುಗಳ ಸಾಗಾಟ ದಂಧೆ ನಡೆಯುತ್ತಿದೆ. ಮತ್ತೊಂದೆಡೆ, ಡ್ರಗ್ಸ್‌ಗೆ ಸಂಬಂಧಿಸಿದ ಪ್ರಕರಣದಲ್ಲಿ ಅಸ್ಸಾಂ ಪೊಲೀಸರು ಆಗಾಗ್ಗೆ ಅದನ್ನು ಬೇಧಿಸುವ ಕಾರ್ಯಗಳನ್ನೂ ಮಾಡುತ್ತಿರುತ್ತಾರೆ. ಇದೀಗ ಅಸ್ಸಾಂ ಎಸ್‌ಟಿಎಫ್ ಮತ್ತು ಕಮ್ರೂಪ್ ಜಿಲ್ಲಾ ಪೊಲೀಸರು ರೂ.11 ಕೋಟಿ ಮೌಲ್ಯದ ಹೆರಾಯಿನ್ ವಶಪಡಿಸಿಕೊಂಡಿದ್ದು, ಇವರೊಂದಿಗೆ ಮೂವರು ಕಳ್ಳಸಾಗಣೆದಾರರನ್ನು ಕೂಡ ಬಂಧಿಸಿದ್ದಾರೆ.
ಎರಡು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಈ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಎಸ್ಟಿಎಫ್ ಡಿಐಜಿ ಪಾರ್ಥ ಸಾರಥಿ ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಸುಳಿವಿನ ಮೇರೆಗೆ ಕಾಮ್ರೂಪ್ ಜಿಲ್ಲಾ ಪೊಲೀಸರು ಶನಿವಾರ ತಡರಾತ್ರಿ ಕಾರ್ಯಾಚರಣೆ ಆರಂಭಿಸಿ ವಾಹನವೊಂದರಲ್ಲಿ 700 ಗ್ರಾಂ ಹೆರಾಯಿನ್ ವಶಪಡಿಸಿಕೊಂಡಿದ್ದಾರೆ. ಇವರೊಂದಿಗೆ ಮೂವರು ಕಳ್ಳಸಾಗಣೆದಾರರನ್ನು ಕೂಡ ಬಂಧಿಸಲಾಗಿದೆ. ಕಳ್ಳಸಾಗಾಣಿಕೆದಾರರಿಂದ ವಶಪಡಿಸಿಕೊಂಡಿರುವ ಮಾದಕ ವಸ್ತುಗಳ ಮೌಲ್ಯ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 11 ಕೋಟಿ ರೂಪಾಯಿ ಎಂದು ತಿಳಿಸಿದರು. ಸದ್ಯ ಪೊಲೀಸರು ಇಡೀ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಕಳ್ಳಸಾಗಾಣಿಕೆದಾರರಿಗಾಗಿ ಪೋಲಿಸರ ಬೇಟೆ
ಅಸ್ಸಾಂನ ಬಾಂಗ್ಲಾದೇಶದ ಗಡಿಯಲ್ಲಿ ಡ್ರಗ್ಸ್ ಕಳ್ಳಸಾಗಣೆಯಾಗುತ್ತಿದೆ. ಇದನ್ನು ತಡೆಯಲು ಪೊಲೀಸರು ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ಹಿಂದೆಯೂ ಅಸ್ಸಾಂ ಪೊಲೀಸರು ಮಾದಕವಸ್ತು ಕಳ್ಳಸಾಗಣೆಗೆ ಸಂಬಂಧಿಸಿದ ದೊಡ್ಡ ಪ್ರಕರಣವನ್ನು ಭೇದಿಸಿದ್ದರು. ವಾಸ್ತವವಾಗಿ ಜೂನ್ 25ರಂದು ಪೊಲೀಸರು 18 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದರು.