ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹುಭಾಷೆ ಗಳಲ್ಲಿ ರಿಲೀಸ್ ಆಗಿರುವ ದೃಶ್ಯಂ ಸಿನಿಮಾ ನಿಮಗೆ ನೆನಪಿರಬಹುದು. ಯಾವ ರೀತಿ ಅಲ್ಲಿ ಪೊಲೀಸ್ ಹಾಗು ನಾಯಕನ ನಡುವೆ ಸನ್ನಿವೇಶಗಳು ಹಾದುಹೋಗುವುದು ಎಂದು. ಇದೀಗ ಅಂತಹ ಘಟನೆ ರಿಯಲ್ ಆಗಿ ನಡೆದಿದೆ .
ಹೌದು, ಮಹಿಳೆ ತನ್ನ ಎರಡೂವರೆ ವರ್ಷದ ಮಗುವನ್ನು ಕೊಂದು ಬಳಿಕ ಹೂತ್ತು ಇಟ್ಟ ಘಟನೆ ಗುಜರಾತ್ನ ಸೂರತ್ ಜಿಲ್ಲೆಯಲ್ಲಿ ನಡೆದಿದೆ.
ಸೂರತ್ನ ದಿಂಡೋಲಿ ಪ್ರದೇಶದಲ್ಲಿ ನಿರ್ಮಾಣ ಸ್ಥಳದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ನಯನಾ ಮಾಂಡವಿ ತನ್ನ ಎರಡೂವರೆ ವರ್ಷದ ಮಗು ವೀರ್ ಮಾಂಡವಿ ಅನ್ನು ಕೊಂದು ಬಳಿಕ ತನ್ನ ಮಗು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದಾಳೆ.
ಪ್ರಕರಣ ದಾಖಲಿಸಿಕೊಂಡ ಬಳಿಕ ಪೊಲೀಸರ ಜತೆ ಸೇರಿ ಸತತ ಮೂರು ದಿನಗಳ ಕಾಲ ಕಾಣೆಯಾಗಿರುವ ಮಗುವಿನ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಂತೆ ಮಗುವಿನ ತಾಯಿಯ ಮೇಲೆ ಶಂಕೆ ವ್ಯಕ್ತವಾಗಿದ್ದು, ಆಕೆಯನ್ನು ಬಂಧಿಸಲಾಗಿದೆ.
ಬಳಿಕ ಕಾರ್ಯಾಚರಣೆಗೆ ಇಳಿದ ಪೊಲೀಸರು, ಮಹಿಳೆ ಕೆಲಸ ಮಾಡುತ್ತಿದ್ದ ಕಟ್ಟಡದ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಿದರು . ಆದರೆ ಮಗು (Child) ಆವರಣದಿಂದ ಹೊರಬರುವುದನ್ನು ನೋಡಲಿಲ್ಲ. ಇದನ್ನು ಆಧರಿಸಿ, ಮಗು ಸೈಟ್ ಬಿಟ್ಟು ಹೋಗಿಲ್ಲ ಎಂದು ಅವರು ತೀರ್ಮಾನಿಸಿದರು. ಮಗು ನಾಪತ್ತೆಯಾಗಿರುವ ಬಗ್ಗೆ ಪೊಲೀಸರು ಮಹಿಳೆಯನ್ನು ಹಲವು ಬಾರಿ ಪ್ರಶ್ನಿಸಿದರೂ ಆಕೆ ಸರಿಯಾದ ರೀತಿಯಲ್ಲಿ ಉತ್ತರ ನೀಡಲ್ಲಿಲ್ಲ. ನಾಪತ್ತೆಯಾದ ಮಗುವಿನ ಹುಡುಕಾಟಕ್ಕೆ ಪೊಲೀಸರು ಶ್ವಾನದಳವನ್ನು ಸಹ ಬಳಸಿದರು, ಆದರೆ ಮಗುವು ನಿರ್ಮಾಣ ಸ್ಥಳವನ್ನು ಬಿಟ್ಟು ಹೋಗಿರುವ ಯಾವುದೇ ಪುರಾವೆಗಳು ಸಿಗಲ್ಲಿಲ್ಲ.
ನಲಿಕ ಮಹಿಳೆ ಪ್ರೇಮಿಯೇ ತನ್ನ ಮಗುವನ್ನು ಕಿಡ್ನಾಪ್ ಮಾಡಿದ್ದಾನೆ ಎಂದು ಆರೋಪಿಸಿದ್ದಾಳೆ. ಜಾರ್ಖಂಡ್ನಲ್ಲಿ ನೆಲೆಸಿರುವ ತನ್ನ ಪ್ರಿಯಕರನೇ ತನ್ನ ಮಗುವನ್ನು ಅಪಹರಿಸಿದ್ದಾನೆ (Kidnap) ಎಂದು ಪೊಲೀಸರಿಗೆ ಹೇಳಿದ್ದಾಳೆ. ಆ ಮಾಹಿತಿಯಂತೆ ಪೊಲೀಸರು ಮಹಿಳೆಯ ಪ್ರೇಮಿಯನ್ನು ಸಂಪರ್ಕಿಸಿದ್ದಾರೆ. ಆದರೆ ಆತ ಸೂರತ್ಗೆ ಹೋಗಿಲ್ಲ ಎಂದು ಪೊಲಿಸರಿಗೆ ತಿಳಿಸಿದ್ದಾನೆ. ಮಗು ನಿರ್ಮಾಣ ಸ್ಥಳವನ್ನು ಬಿಟ್ಟು ಹೋಗದ ಕಾರಣ ಮತ್ತು ಅಪಹರಣದ ಬಗ್ಗೆ ಯಾವುದೇ ಪುರಾವೆಗಳಿಲ್ಲದ ಕಾರಣ ಪೊಲೀಸರು ಮಹಿಳೆಯ ವಿಚಾರಣೆಯನ್ನು ತೀವ್ರಗೊಳಿಸಿದರು, ಆಕೆ ಅಂತಿಮವಾಗಿ ತನ್ನ ಮಗುವನ್ನು ಕೊಂದಿರುವುದಾಗಿ ಒಪ್ಪಿಕೊಂಡಳು.
ಆದರೆ, ಶವವನ್ನು ಎಲ್ಲಿ ಬಚ್ಚಿಟ್ಟಿದ್ದಾಳೆ ಎಂದು ಕೇಳಿದಾಗ ಸುಳ್ಳು ಮಾಹಿತಿ ನೀಡಿದ್ದಾಳೆ.ಆರಂಭದಲ್ಲಿ, ಮಹಿಳೆ ಶವವನ್ನು (Deadbody) ಗುಂಡಿಯಲ್ಲಿ ಹೂತಿಟ್ಟಿದ್ದೇನೆ ಎಂದು ಹೇಳಿಕೊಂಡಿದ್ದಾಳೆ, ಆದರೆ ಸ್ಥಳವನ್ನು ಅಗೆದು ನೋಡಿದಾಗ ಏನೂ ಪತ್ತೆಯಾಗಲಿಲ್ಲ. ನಂತರ ಶವವನ್ನು ಕೊಳಕ್ಕೆ ಎಸೆದಿರುವುದಾಗಿ ಪೊಲೀಸರಿಗೆ ತಿಳಿಸಿದಳು, ಆದರೆ ಪೊಲೀಸರಿಗೆ ಅಲ್ಲಿಯೂ ಏನೂ ಸಿಗಲಿಲ್ಲ. ಕಠಿಣ ವಿಚಾರಣೆಯ ಅಡಿಯಲ್ಲಿ, ಮಹಿಳೆಯು ಶವವನ್ನು ನಿರ್ಮಾಣ ಸ್ಥಳದ ಶೌಚಾಲಯಕ್ಕಾಗಿ ಉದ್ದೇಶಿಸಲಾದ ಗುಂಡಿಗೆ ಎಸೆದಿದ್ದೇನೆ ಎಂದು ಬಹಿರಂಗಪಡಿಸಿದಳು.
ತನ್ನ ಮಗನನ್ನು ಬಚ್ಚಿಟ್ಟಿರುವ ಉದ್ದೇಶದ ತಿಳಿಸಿದ ಮಹಿಳೆ, ತಾನು ಮೂಲತಃ ಜಾರ್ಖಂಡ್ನವಳು ಮಗುವಿನೊಂದಿಗೆ ಬಂದರೆ ಸ್ವೀಕರಿಸುವುದಿಲ್ಲ ಎಂದು ಪ್ರೇಮಿ ತಿಳಿಸಿದ್ದ. ಹೀಗಾಗಿ ಪ್ರಿಯಕರನನ್ನು ಸೇರಲು ಮಗುವನ್ನು ಕೊಂದಿದ್ದಾಗಿ ತಿಳಿಸಿದ್ದಾಳೆ. ಮೃತದೇಹವನ್ನು ಏನು ಮಾಡಬೇಕೆಂದು ತೋಚದೆ ದೃಶ್ಯಂ ಚಲನಚಿತ್ರ ವೀಕ್ಷಿಸಿ ಅದರಂತೆ ಮಾಡಿರುವುದಾಗಿ ಹೇಳಿದ್ದಾಳೆ.