ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಸನದ ವೈದ್ಯಕೀಯ ಬೋಧಕ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ (Infant) ಐಸಿಯು (ICU) ವಾರ್ಡ್ನಲ್ಲಿ ಶಾರ್ಟ್ಸರ್ಕ್ಯೂಟ್ (Short Circuit) ಉಂಟಾಗಿದ್ದು, ಭಾರೀ ಅನಾಹುತವೊಂದು ತಪ್ಪಿದ ಘಟನೆ ನಡೆದಿದೆ.
ದಿಢೀರ್ ಶಾರ್ಟ್ ಸರ್ಕ್ಯೂಟ್ನಿಂದಾಗಿ ಐಸಿಯು ಕೋಣೆಯೊಳೆಗೆ ದಟ್ಟವಾದ ಹೊಗೆ ತುಂಬಿಕೊಂಡಿತ್ತು. ಕೂಡಲೇ ಕೊಠಡಿಯ ಕಿಟಕಿ ಗಾಜುಗಳನ್ನು ಒಡೆದು ಐಸಿಯುನಲ್ಲಿದ್ದ 24 ನವಜಾತ ಶಿಶುಗಳನ್ನು ಬೇರೆಡೆಗೆ ಶಿಫ್ಟ್ ಮಾಡಲಾಗಿದೆ.
ಐಸಿಯುನ ಎಸಿಯ ವಿದ್ಯುತ್ ಪರಿವರ್ತಕ (Power Converter) ಬ್ಲಾಸ್ಟ್ ಆಗಿದ್ದೇ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ. ಎಸಿಯಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಬೆಂಕಿಯನ್ನು ನಂದಿಸಿದ್ದಾರೆ. ಆಸ್ಪತ್ರೆಯ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತವೊಂದು ತಪ್ಪಿದೆ.
ಶಾರ್ಟ್ ಸರ್ಕ್ಯೂಟ್ನಿಂದಾಗಿ ಕ್ಷಣ ಕಾಲ ಪೋಷಕರು ಕಂಗಾಲಾಗಿದ್ದರು. ಸದ್ಯ ಎಲ್ಲ ಶಿಶುಗಳನ್ನು ಬೇರೆಡೆಗೆ ರವಾನಿಸಲಾಗಿದ್ದು, ಪೋಷಕರು ಹಾಗೂ ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ.