ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ತನ್ನ ಗಮನವನ್ನು ಆಂಧ್ರಪ್ರದೇಶದತ್ತ ಹರಿಸಿದ್ದು, ಪ್ರಸ್ತುತ ರಾಹುಕ ಗಾಂಧಿ ಎಪಿ ಪರ್ಯಟನೆಯಲ್ಲಿದ್ದಾರೆ. ನಿನ್ನೆ ವಿಜಯವಾಡದ ಗನ್ನವರಂ ವಿಮಾನ ನಿಲ್ದಾಣದಲ್ಲಿ ಬಂದಿಳಿದ ರಾಹುಲ್ ಹೆಲಿಕಾಪ್ಟರ್ ಮೂಲಕ ಖಮ್ಮಂ ಸಭಾಂಗಣ ತಲುಪಿ ಸಾರ್ವಜನಿಕ ಸಭೆಯಲ್ಲಿ ಭಾಗಿಯಾದರು. ಈ ಸಂದರ್ಭದಲ್ಲಿ ರಾಹುಲ್ ಅಲ್ಲಿನ ನಾಯಕರೊಂದಿಗೆ ಸುಮಾರು 20 ನಿಮಿಷಗಳ ಕಾಲ ಪ್ರತ್ಯೇಕ ಸಭೆ ನಡೆಸಿ, ಎಪಿಯಲ್ಲಿನ ರಾಜಕೀಯ ಪರಿಸ್ಥಿತಿ ಮತ್ತು ಕಾಂಗ್ರೆಸ್ ಪಕ್ಷದ ಬಲವರ್ಧನೆ ಕುರಿತು ಚರ್ಚಿಸಲಾಯಿತು.
ವಿಭಜನಾ ಕಾಯ್ದೆ, ಪೊಲವರಂ ಯೋಜನೆ ಕಾಮಗಾರಿಗಳು, ರಾಜಧಾನಿ ನಿರ್ಮಾಣ, ವಿಶೇಷ ಸ್ಥಾನಮಾನ ಮತ್ತಿತರ ವಿಚಾರಗಳಲ್ಲಿ ಎಪಿಗೆ ಅನ್ಯಾಯವಾಗುತ್ತಿದೆ ಎಂದು ಎಪಿ ಕಾಂಗ್ರೆಸ್ ನಾಯಕರು ರಾಹುಲ್ ಗಮನಕ್ಕೆ ತಂದರು. ಆಂಧ್ರದ ರಾಜಧಾನಿಗೆ ಭೂಮಿ ನೀಡಿದ ಅಮರಾವತಿಯ ರೈತರಿಗೆ ಸರ್ಕಾರ ನೋವುಂಟು ಮಾಡುತ್ತಿದೆ ಎಂದರು. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ನಾವು ಈ ಕುರಿತು ಶ್ರಮಿಸೋಣ ಎಂದು ರಾಹುಲ್ ಭರವಸೆ ನೀಡಿದರು. ಈ ಹಿಂದೆ ಹೇಳಿದಂತೆ ಎಪಿಗೆ ವಿಶೇಷ ಸ್ಥಾನಮಾನ ನೀಡಲು ಕಾಂಗ್ರೆಸ್ ಸಿದ್ಧವಿದ್ದು, ಈ ವಿಚಾರವನ್ನು ಜನರ ಬಳಿಗೆ ಕೊಂಡೊಯ್ಯುವಂತೆ ಕಾಂಗ್ರೆಸ್ ನಾಯಕರಿಗೆ ರಾಹುಲ್ ಸೂಚಿಸಿದ್ದಾರೆ. ಆಂಧ್ರದ ರಾಜಧಾನಿ ಅಮರಾವತಿಗೆ ಕಾಂಗ್ರೆಸ್ ಪಕ್ಷ ಬದ್ಧವಾಗಿದೆ ಮತ್ತು ಪ್ರಿಯಾಂಕಾ ಗಾಂಧಿ ಶೀಘ್ರದಲ್ಲೇ ಅಮರಾವತಿ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ ಎಂದು ರಾಹುಲ್ ಹೇಳಿದರು.
ವಿಶಾಖಪಟ್ಟಣ ಉಕ್ಕು ಕಾರ್ಖಾನೆಯ ಖಾಸಗೀಕರಣವನ್ನು ತಡೆಯುವ ಪ್ರಯತ್ನಗಳನ್ನು ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿ ಅವರ ಗಮನಕ್ಕೆ ತಂದರು. ಖಾಸಗೀಕರಣ ತಡೆಯಲು ಎಐಸಿಸಿ ಮಟ್ಟದಲ್ಲಿ ಹೋರಾಟ ನಡೆಸುವಂತೆ ಮನವಿ ಪತ್ರ ನೀಡಿದರು. ಇದಕ್ಕೆ ಸಮ್ಮತಿಸಿದ ರಾಹುಲ್, ಜುಲೈ, ಆಗಸ್ಟ್ ತಿಂಗಳಲ್ಲಿ ವಿಶಾಖಪಟ್ಟಣಕ್ಕೆ ಆಗಮಿಸಿ ಉಕ್ಕು ಕಾರ್ಖಾನೆಯ ಖಾಸಗೀಕರಣದ ವಿರುದ್ಧ ಹೋರಾಟ ಮಾಡೋಣ ಎಂದರು.