ಹೊಸದಿಗಂತ ಡಿಜಿಟಲ್ ಡೆಸ್ಕ್:
ರಸ್ತೆಯಲ್ಲಿ ಕೆಟ್ಟು ನಿಂತಿದ್ದ ಕಾರಿನ ಹಿಂಬದಿಗೆ ಮತ್ತೊಂದು ಕಾರು ಬಂದು ಡಿಕ್ಕಿ ಹೊಡೆದ ಪರಿಣಾಮ ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿರುವ ಘಟನೆ ಕಳೆದ ರಾತ್ರಿ ನಡೆದಿದೆ.
ದೇವನಹಳ್ಳಿ ಪೊಲೀಸ್ ಠಾಣೆಯ ಕಾನ್ಸ್ಟೆಬಲ್ ಸುರೇಶ್ ಮೃತಪಟ್ಟವರು. ಕೆಂಪೇಗೌಡ ಏರ್ಪೋರ್ಟ್ ರಸ್ತೆಯ ಚಿಕ್ಕಜಾಲ ಬಳಿ ಸುರೇಶ್ ರಸ್ತೆಯಲ್ಲಿ ನಿಂತಿದ್ದ ಕಾರು ಪರಿಶೀಲನೆಗೆ ಬಂದಿದ್ದರು. ಇದೇ ವೇಳೆ ಜತೆಗಿದ್ದ ಪೊಲೀಸ್ ಇನ್ಸ್ಪೆಕ್ಟರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ದೇವನಹಳ್ಳಿ ಇನ್ಸ್ಪೆಕ್ಟರ್ ಧರ್ಮೇ ಗೌಡ ಮತ್ತು ಜೀಪ್ ಚಾಲಕ ಸುರೇಶ್ ಅವರು ನೈಟ್ ರೌಂಡ್ಸ್ ಮಾಡುತ್ತಿದ್ದರು. ಹೆದ್ದಾರಿ ಬದಿಯಲ್ಲಿ ಕೆಟ್ಟು ನಿಂತಿದ್ದ ಕಾರು ಗಮನಿಸಿ ಪರಿಶೀಲನೆ ಮಾಡುತ್ತಿದ್ದರು. ಇನ್ಸ್ಪೆಕ್ಟರ್ ಧರ್ಮೇಗೌಡರಿಗೆ ಫೋನ್ ಕಾಲ್ ಬಂದಿದ್ದು, ಮಾತನಾಡಲು ಕೊಂಚ ರಸ್ತೆಬದಿಗೆ ತೆರಳಿದ್ದಾರೆ. ಇದೇ ಸಂದರ್ಭದಲ್ಲಿ ಅಸೆಂಟ್ ಕಾರು ಕೆಟ್ಟು ನಿಂತಿದ್ದ ಇನ್ನೋವಾ ಕಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಸುರೇಶ್ ಮೃತಪಟ್ಟಿದ್ದು, ಇನ್ನೊಬ್ಬರಿಗೆ ಕೈ, ಕಾಲು ಮುರಿದಿದೆ.
ಅಪಘಾತವೆಸಗಿದ ಅಸೆಂಟ್ ಕಾರಿನಲ್ಲಿ ಮೂವರು ಯುವಕರು, ಮತ್ತು ಯುವತಿಯರಿದ್ದರು. ಅವರಿಗೂ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಕರ್ತವ್ಯನಿರತ ಪೊಲೀಸ್ ಕಾನ್ಸ್ಟೆಬಲ್ ಸುರೇಶ್ ದುರ್ಮರಣಕ್ಕೆ ಪೊಲೀಸ್ ಇಲಾಖೆ ಸಂತಾಪ ಸೂಚಿಸಿದೆ. ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.