ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ನಿವಾಸದ ಮೇಲೆ ಡ್ರೋನ್ ಹಾರಾಟ ನಡೆಸಿರುವುದು ಸಂಚಲನ ಮೂಡಿಸಿದೆ. ಸೋಮವಾರ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಪ್ರಧಾನಿ ನಿವಾಸದ ಮೇಲೆ ಡ್ರೋನ್ ಹಾರುತ್ತಿರುವುದು ಕಂಡುಬಂದಿದೆ.
ಎಸ್‌ಪಿಜಿ ದೆಹಲಿ ಪೊಲೀಸರಿಗೆ ಈ ವಿಷಯ ತಿಳಿಸುತ್ತಿದ್ದಂತೆ ಉನ್ನತ ಪೊಲೀಸ್ ಅಧಿಕಾರಿಗಳು ಪ್ರಧಾನಿ ನಿವಾಸಕ್ಕೆ ದೌಡಾಯಿಸಿದ್ದಾರೆ. ಡ್ರೋನ್ ಎಲ್ಲಿಂದ ಬಂತು, ಎಲ್ಲಿಗೆ ಹೋಯಿತು ಎಂಬ ವಿವರಗಳಿಗಾಗಿ ದೆಹಲಿ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಹುಡುಕಾಟ ಆರಂಭಿಸಿದ್ದಾರೆ. ಆದರೆ, ಇದುವರೆಗೂ ಡ್ರೋನ್ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.
ಡ್ರೋನ್ ಯಾರ ಮಾಲೀಕತ್ವದಲ್ಲಿದೆ ಮತ್ತು ಅದು ಪ್ರಧಾನಿ ನಿವಾಸಕ್ಕೆ ಹೇಗೆ ಬಂದಿತು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಧಾನಿ ಮೋದಿ ಅವರ ನಿವಾಸ ಮತ್ತು ಸುತ್ತಮುತ್ತ ವಿಮಾನ ಹಾರಾಟ ನಿಷೇಧಿತ ವಲಯ ಜಾರಿಯಲ್ಲಿದೆ. ಇಷ್ಟು ಬಿಗಿ ಭದ್ರತೆಯ ನಡುವೆಯೂ ಮೋದಿ ನಿವಾಸದ ಮೇಲೆ ಡ್ರೋನ್ ಹಾರಾಟ ನಡೆಸಿರುವುದು ಸಂಚಲನ ಮೂಡಿಸುತ್ತಿದೆ.