ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಸರ್ಕಾರವು ಬಸವಣ್ಣನ ತತ್ವವನ್ನು ಅನುಸರಿಸುತ್ತಿದೆ. ಎಲ್ಲಾ ಸಮುದಾಯಗಳ ಪರವಾಗಿ, ಕುವೆಂಪು ಅವರ ಸರ್ವಜನಾಂಗದ ಶಾಂತಿ ತೋಟ ತತ್ವದಡಿ ಕೆಲಸ ನಿರ್ವಹಿಸುತ್ತಿದೆ. ಬಸವಣ್ಣ, ಸರ್ವಜ್ಞ ಸೇರಿ ಅನೇಕ ಸಂತರ ಶಾಂತಿ ತತ್ವ ಪಾಲನೆ ಮಾಡಲಾಗುತ್ತಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.
ಜಂಟಿ ಅಧಿವೇಶನ ಉದ್ಘಾಟಿಸಿ ಮಾತನಾಡಿದ ಗೆಹ್ಲೋಟ್ ಅವರು, ಇಂದಿರಾ ಕ್ಯಾಂಟೀನ್ ಮೂಲಕ ಸರ್ಕಾರ ರಾಜ್ಯವನ್ನು ಹಸಿವು ಮುಕ್ತ ಮಾಡಲಿದೆ. ಬಡವರು, ದುಡಿಯುವ ವರ್ಗದ ಜನರು, ವಲಸೆ ಕಾರ್ಮಿಕರು ಮುಂತಾದವರ ಹಸಿವು ತಣಿಸಲು ಇಂದಿರಾ ಕ್ಯಾಂಟೀನ್ ಸ್ಥಾಪನೆ ಮಾಡಲಾಗಿದೆ. ಯುವನಿಧಿ ಯೋಜನೆಯಡಿ ನಿರುದ್ಯೋಗಿ ಯುವಕರಿಗೆ ಹಣ ನೀಡಲಾಗುತ್ತದೆ ಎಂದರು. ಮುಂದಿನ 5 ವರ್ಷಗಳ ಕಾಲ ಆರ್ಥಿಕತೆಗೆ ಒತ್ತು ನೀಡುತ್ತೇವೆ. ಬುದ್ಧ, ಬಸವ, ನಾರಾಯಣ ಗುರು, ಅಂಬೇಡ್ಕರ್, ಕುವೆಂಪು ಇವರು ಕನಸು ಕಂಡಿದ್ದ ಸಮಾಜ ನಿರ್ಮಾಣ ಮಾಡುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಆಹಾರ ಭದ್ರತೆ ಕಾಯ್ದೆ ಅಡಿ ಪ್ರಸ್ತುತ 5 ಕೆಜಿ ಅಕ್ಕಿ ಕೊಡಲಾಗುತ್ತಿದೆ. ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಸೇರಿ 10 ಕೆಜಿ ಕೊಡುತ್ತಿದ್ದು, ರಾಜ್ಯವನ್ನು ಹಸಿವು ಮುಕ್ತ ಮಾಡಲಿದ್ದೇವೆ. ಪ್ರತಿ ಕೆಜಿಗೆ 34 ರೂಪಾಯಿ ವರ್ಗಾವಣೆ ಮಾಡುತ್ತೇವೆ. ಇದಕ್ಕಾಗಿ ಯಾವುದೇ ತ್ಯಾಗ ಮಾಡಲು ಸಿದ್ಧರಿದ್ದೇವೆ. ಅನ್ನ ನೀಡದ ಸರ್ಕಾರವನ್ನ ಜನ ದ್ರೋಹಿ ಸರ್ಕಾರ ಎನ್ನುತ್ತಾರೆ. ಆದರೆ ಇಂದಿರಾ ಕ್ಯಾಂಟಿನ್ ಮೂಲಕ ಜನರ ಹೊಟ್ಟೆ ತುಂಬಿಸಿದ್ದೇವೆ. ಯುವ ನಿಧಿ ಈಗಾಗಲೇ ಘೋಷಣೆ ಮಾಡಿದ್ದು, ಯುವನಿಧಿ ಮೂಲಕ ನಿರುದ್ಯೋಗಿಗಳಿಗೆ ಭತ್ಯೆ ನೀಡುತ್ತೇವೆ. ಗೃಹಜ್ಯೋತಿಗೆ 209 ಯೂನಿಟ್ ಉಚಿತ ವಿದ್ಯುತ್ ನೀಡುತ್ತಿದ್ದೇವೆ. 2.14 ಕೋಟಿ ಕುಟುಂಬಗಳಿಗೆ ಈ ಯೋಜನೆ ಅನುಕೂಲವಾಗಲಿದೆ. ಮಹಿಳಾ ಸಬಲೀಕರಣಕ್ಕಾಗಿ ಗೃಹಲಕ್ಷ್ಮಿ ಯೋಜನೆ ಜಾರಿಗೆ ತಂದಿದ್ದೇವೆ. ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ ಮನೆಯ ಮುಖ್ಯಸ್ಥೆ ಮಹಿಳೆಗೆ ನೀಡುತ್ತೇವೆ ಎಂದು ರಾಜ್ಯಪಾಲರು ತಮ್ಮ ಭಾಷಣದಲ್ಲಿ ಹೇಳಿದರು.
2014ರಲ್ಲಿ ಜಾರಿಯಾದ ಕೃಷಿಭಾಗ್ಯ ಯೋಜನೆಯಿಂದ ರಾಜ್ಯದ ಮಳೆಯಾಶ್ರಿತ ಪುದೇಶಗಳಲ್ಲಿನ ರೈತರು ಕೃಷಿಹೊಂಡ, ಪಾಲಿ ಹೌಸ್ ಮತ್ತು ಶೇಡ್ ನೆಟ್ ಮುಂತಾದ ವ್ಯವಸ್ಥೆ ಬಳಸಿ ಮಾಡಿದ ಕೃಷಿಯಿಂದ ರೈತರು ಹೆಚ್ಚಿನ ಆದಾಯ ಗಳಿಸಲು ಸಾಧ್ಯ. ಈ ಕುರಿತು ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರ ವರದಿ ನೀಡಿದೆ. ಈ ಯೋಜನೆಯನ್ನು ಇನ್ನಷ್ಟು ವಿಸ್ತರಿಸಿ ರೈತರ ಬದುಕನ್ನು ಸುಧಾರಿಸಲಾಗುವುದು.
ನನ್ನ ಸರ್ಕಾರವು ಈ ಯೋಜನೆಯನ್ನು ಬಲಪಡಿಸುತ್ತದೆ ಮತ್ತು ವಿಸ್ತರಿಸುತ್ತದೆ. ನಮ್ಮ ರಾಜ್ಯವು ರಾಜಸ್ಥಾನದ ನಂತರ ಅತಿ ಹೆಚ್ಚು ಒಣಭೂಮಿ, ಪುದೇಶವನ್ನು ಹೊಂದಿದೆ. ಬಹಳ ದಿನಗಳ ಬಳಿಕ ಬಾಕಿ ನೀರಾವರಿ ಯೋಜನೆ ಜಾರಿ ಮಾಡುತ್ತೇವೆ. ಕೆರೆ ತುಂಬಿಸುವ ಕೆಲಸ ಮಾಡುತ್ತಿದ್ದು, ರೈತರ ಆದಾಯ ಹೆಚ್ಚಾಗಲು ಕ್ರಮ ತೆಗೆದುಕೊಳ್ಳಲು ನನ್ನ ಸರ್ಕಾರವು ಬದ್ಧವಾಗಿದೆ ಎಂದಿದ್ದಾರೆ.
ಒಟ್ಟು 24 ನಿಮಿಷವಿದ್ದ ಲಿಖಿತ ಭಾಷಣವನ್ನು 30 ನಿಮಿಷದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ಓದಿದರು. ಸರ್ಕಾರಗಳ ಗ್ಯಾರಂಟಿ ಯೋಜನೆಯನ್ನು ಅನುಷ್ಠಾನಗೊಳಿಸಲು ಬದ್ಧ ಎನ್ನುವುದರ ಜತೆಗೆ 40 ದಿನಗಳ ಸರ್ಕಾರವನ್ನು ಸಮರ್ಥಿಸಿಕೊಂಡರು. ಕರ್ನಾಟಕವನ್ನು ಸರ್ವಜನಾಂಗದ ಶಾಂತಿಯ ತೋಟ ಮಾಡುವುದೇ ನಮ್ಮ ಗುರಿ ಎಂದು ರಾಜ್ಯಪಾಲರು ನುಡಿದರು.