ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ತನ್ನ ಪಾಲುದಾರ ರಾಷ್ಟ್ರಗಳಾದ ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ಕೆನಡಾ ದೇಶಗಳಿಗೆ ಯಾವುದೇ ಕಾರಣಕ್ಕೂ ಖಲಿಸ್ತಾನಿ ಭಯೋತ್ಪಾದಕರು ನಿಮ್ಮ ನೆಲವನ್ನು ಬಳಸಲು ಅವಕಾಶ ನೀಡಬೇಡಿ ಎಂದು ಮನವಿ ಮಾಡಿದೆ.
ಈ ಕುರಿತಾಗಿ ಮಾಹಿತಿ ನೀಡಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್, ಲಿಸ್ತಾನಿಗಳ ಆಮೂಲಾಗ್ರ ಮನಸ್ಥಿತಿಯು ಭಾರತ ಮತ್ತು ಅವರು ವಾಸ ಮಾಡುತ್ತಿರುವ ಪಾಲುದಾರ ದೇಶಗಳಿಗೆ ಹಾನಿಕಾರಕವಾಗಿದೆ . ಇಂತಹ ಉಗ್ರಗಾಮಿ ಮನಸ್ಥಿತಿ ನಮ್ಮ ದ್ವಿಪಕ್ಷೀಯ ಸಂಬಂಧಗಳಿಗೆ ಧಕ್ಕೆ ತರುತ್ತದೆ ಎಂದರು.
ಒಂದೇ ವೇಳೆ ಖಲಿಸ್ತಾನಿಗಳು ನಿಮ್ಮ ನೆಲದಿಂದ ಕಾರ್ಯನಿರ್ವಹಿಸುತ್ತಿದ್ದರೆ, ಇದು ನಮ್ಮ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆ. ನಾವು ಈ ದೇಶಗಳ ಸರ್ಕಾರದೊಂದಿಗೆ ಪೋಸ್ಟರ್ಗಳನ್ನು ಅಂಟಿಸಿರುವ ವಿಷಯವನ್ನು ಪ್ರಸ್ತಾಪ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.
ಜುಲೈ 8 ರಂದು ನಡೆಯಲಿರುವ ಮೆರವಣಿಗೆಯ ಕುರಿತಾಗಿ ಖಲಿಸ್ತಾನ್ ಪರ ವ್ಯಕ್ತಿಗಳಿಗೆ ತಿಳಿಸುವ ಪೋಸ್ಟರ್ಗಳನ್ನು ಕೆನಡಾದಲ್ಲಿ ಪ್ರಸಾರ ಮಾಡುತ್ತಿರುವ ಸಮಯದಲ್ಲಿ ಜೈಶಂಕರ್ ಈ ಹೇಳಿಕೆ ನೀಡಿದ್ದಾರೆ.
ಇತ್ತೀಚೆಗೆ ಕೆನಡಾದ ನಡುಬೀದಿಯಲ್ಲಿ ಅಪರಿಚಿತ ವ್ಯಕ್ತಿಗಳಿಂದ ಹತ್ತೆಯಾದ ಖಲಿಸ್ತಾನಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ನ ನೆನಪಿನಲ್ಲಿ ಈ ಮೆರವಣಿಗೆ ನಡೆಸಲಾಗುತ್ತಿದೆ. ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿ ಗುರುದ್ವಾರದ ಹೊರಗೆ ಈತನನ್ನು ಅಪರಿಚಿತ ಇಬ್ಬರು ವ್ಯಕ್ತಿಗಳು ಬೈಕ್ನಲ್ಲಿ ಬಂದು ಶೂಟ್ ಮಾಡಿದ್ದರು. ಒಟ್ಟಾವಾದಲ್ಲಿರುವ ಭಾರತದ ಹೈಕಮಿಷನರ್ ಸಂಜಯ್ ಕುಮಾರ್ ವರ್ಮಾ ಮತ್ತು ಟೊರೊಂಟೊದಲ್ಲಿನ ಕಾನ್ಸುಲೇಟ್ ಜನರಲ್ ಅಪೂರ್ವ ಶ್ರೀವಾಸ್ತವ ಅವರಿಗೆ ಬೆದರಿಕೆ ಹಾಕಿರುವ ಈ ಪೋಸ್ಟರ್ಗಳು ಭಾರತ ಸರ್ಕಾರಕ್ಕೆ ಕಳವಳವನ್ನು ಉಂಟು ಮಾಡಿವೆ ಎಂದಿದ್ದಾರೆ.
ನಿಜ್ಜರ್ ಸರ್ರೆ ಸಿಟಿಯಲ್ಲಿರುವ ಗುರುನಾನಕ್ ಸಿಖ್ ಗುರುದ್ವಾರದ ಅಧ್ಯಕ್ಷರಾಗಿದ್ದರು ಮತ್ತು ಭಾರತದಲ್ಲಿ ನಿಷೇಧಿಸಲ್ಪಟ್ಟಿರುವ ಸಿಖ್ಸ್ ಫಾರ್ ಜಸ್ಟಿಸ್ (SFJ) ಎಂಬ ಪ್ರತ್ಯೇಕತಾವಾದಿ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದರು.
ಸಿಖ್ ಫಾರ್ ಜಸ್ಟೀಸ್ನ ಮುಖ್ಯ ವಕೀಲನಾಗಿರುವ ಹಾಗೂ ಭಾರತದ ಮೋಸ್ಟ್ ವಾಂಟೆಡ್ ಲಿಸ್ಟ್ನಲ್ಲಿರುವ ಗುರುಪತ್ವಂತ್ ಪನ್ನುನ್, ನಿಜ್ಜರ್ನ ಸಾವನ್ನು ಹತ್ಯೆ ಎಂದು ಕರೆದಿದ್ದಲ್ಲದೆ, ಇದಕ್ಕೆ ಭಾರತವೇ ಕಾರಣ ಎಂದು ನೇರವಾಗಿ ದೂಷಣೆ ಮಾಡಿದ್ದರು.