ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿ ಮತ್ತು ಜೆಡಿಎಸ್ ಜತೆಯಾಗಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಅದರ ಸರ್ಕಾರದ ವಿರುದ್ಧ ಹೋರಾಡಲಿವೆ ಎಂದು ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಭ್ರಷ್ಟಾಚಾರದ ಆರೋಪ ಹೊತ್ತಿರುವ ಕಾಂಗ್ರೆಸ್ ಸರ್ಕಾರದ ಮೇಲೆ ಕುಮಾರಸ್ವಾಮಿ ವಾಗ್ದಾಳಿ ನಡೆಸಿರುವುದನ್ನು ಬೆಂಬಲಿಸಿದರು. ಮುಖ್ಯಮಂತ್ರಿಗಳ ಕಚೇರಿಯಲ್ಲಿ ಅಧಿಕಾರಿಗಳ ವರ್ಗಾವಣೆಗೆ ಲಂಚ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿರುವ ಕುಮಾರಸ್ವಾಮಿ, ಸಿದ್ದರಾಮಯ್ಯನವರ ಪುತ್ರ ಡಾ.ಯತೀಂದ್ರ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿದ್ದಾರೆ.
ಹೆಚ್‌ಡಿ ಕುಮಾರಸ್ವಾಮಿ ಹೇಳಿದ್ದೆಲ್ಲ ಸತ್ಯ ಮತ್ತು ಅವರ ಹೇಳಿಕೆಯನ್ನು ನಾನು ಬೆಂಬಲಿಸುತ್ತೇನೆ. ಮುಂದೆಯೂ ಒಗ್ಗಟ್ಟಾಗಿ ಹೋರಾಡುತ್ತೇವೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಈ ಮೂಲಕ ಮತ್ತೆ ಬಿಜೆಪಿ ಹಾಗೂ ಜೆಡಿಎಸ್ (BJP JDS) ಮೈತ್ರಿ ಮಾಡಿಕೊಳ್ಳಲಿವೆಯೇ ಎಂಬ ಕುತೂಹಲ ಹೆಚ್ಚಾಗಿದೆ.
ಜಿಎಸ್‌ಟಿ ಇದೆ ಮತ್ತು ಜತೆಗೆ ವೈಎಸ್‌ಟಿಯೂ (ಯತೀಂದ್ರ ವಿಶೇಷ ತೆರಿಗೆ) ಇದೆ ಎಂದು ಕುಮಾರಸ್ವಾಮಿ ಒಂದೆರಡು ದಿನಗಳ ಹಿಂದೆ ಹೇಳಿದ್ದರು. ವರ್ಗಾವಣೆಗಾಗಿ ಕೆಎಸ್‌ಆರ್‌ಟಿಸಿ ಮತ್ತು ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಸಿಂಡಿಕೇಟ್‌ಗಳಿವೆ ಎಂದಿದ್ದರು. ಬಿಜೆಪಿಯ ಫೈರ್‌ಬ್ರಾಂಡ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಕುಮಾರಸ್ವಾಮಿ ಆರೋಪವನ್ನು ಬೆಂಬಲಿಸಿದ್ದಾರೆ.