ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿರುವ ಮೀಸಲಾತಿ (Reservation) ವ್ಯವಸ್ಥೆಯನ್ನು ಹಂತ ಹಂತವಾಗಿ ತೆಗೆದುಹಾಕಲು ಮತ್ತು ಪರ್ಯಾಯ ವಿಧಾನವನ್ನು ರೂಪಿಸುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ (Supreme Court) ವಜಾ ಮಾಡಿದೆ.
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿ ಪಿಎಸ್ ನರಸಿಂಹ ಅವರ ಪೀಠವು, ಅರ್ಜಿಯು ಕ್ಷುಲ್ಲಕ ಹಾಗೂ ಅನಗತ್ಯವಾಗಿದೆ. ಈ ಹಿನ್ನೆಲೆ ಅರ್ಜಿ ವಜಾ ಮಾಡುವುದಲ್ಲದೇ, ಅರ್ಜಿದಾರರಾದ ವಕೀಲ ಸಚಿನ್ ಗುಪ್ತಾ ಅವರ ಮೇಲೆ 25,000 ರೂ. ದಂಡ ವಿಧಿಸಿದೆ ಎಂದು ಹೇಳಿದೆ.
ಇಲ್ಲಿ ಪಿಐಎಲ್ ನ್ಯಾಯಾಲಯದ ಪ್ರಕ್ರಿಯೆಯ ದುರುಪಯೋಗವಾಗಿದೆ. ಹೀಗಾಗಿ ನಾವು 25,000 ರೂ. ದಂಡವನ್ನು ಸುಪ್ರೀಂ ಕೋರ್ಟ್‌ನ ವಕೀಲರ ಕಲ್ಯಾಣ ನಿಧಿಗೆ ಪಾವತಿಸಲು ನಿರ್ದೇಶಿಸುತ್ತೇವೆ. ಪಾವತಿಯ ರಶೀದಿಯನ್ನು 2 ವಾರಗಳಲ್ಲಿ ಸಲ್ಲಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.