ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ(ಯುಸಿಸಿ) ಜಾರಿಗೆ ತರುವ ಸಮಯ ಈಗ ಬಂದಿದೆ ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ ಮಂಗಳವಾರ ಹೇಳಿದ್ದಾರೆ.
ಗುವಾಹಟಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ 25ನೇ ಘಟಿಕೋತ್ಸವ ಉದ್ದೇಶಿಸಿ ಮಾತನಾಡಿದ ಅವರು, ಸಂವಿಧಾನದ 44ನೇ ವಿಧಿಯು ದೇಶಾದ್ಯಂತ ತನ್ನ ನಾಗರಿಕರ ಸುರಕ್ಷತೆ ಕಲ್ಪಿಸಲು ಯುಸಿಸಿಯ ಬಗ್ಗೆ ಸ್ಪಷ್ಟವಾಗಿ ಹೇಳುತ್ತದೆ ಎಂದರು.
ಸಂವಿಧಾನದ ಪಿತಾಮಹರ ಆಲೋಚನಾ ಪ್ರಕ್ರಿಯೆಯಲ್ಲೂ ಯುಸಿಸಿಯ ಚಿಂತನೆಗಳಿದ್ದವು. ಹೀಗಾಗಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಕಾಲ ಸನ್ನಿಹಿತವಾಗಿದೆ. ಇದಕ್ಕೆ ಅಡ್ಡಿ ಅಥವಾ ಮತ್ತಷ್ಟು ವಿಳಂಬಕ್ಕೆ ಯಾವುದೇ ಕಾರಣವಿಲ್ಲಎಂದು ಅವರು ಹೇಳಿದರು.
ಸಂವಿಧಾನವನ್ನು ಅನುಸರಿಸಿ, ಯುಸಿಸಿಯನ್ನು ಜಾರಿಗೆ ತರಲು ಪ್ರಯತ್ನಿಸುತ್ತಿರುವಾಗ ಕೆಲವು ಜನರ ಪ್ರತಿಕ್ರಿಯೆ ನೋಡಿ ನಾನು ದಿಗ್ಭ್ರಮೆಗೊಂಡಿದ್ದೇನೆ. ರಾಜಕೀಯ ಹಿತಾಸಕ್ತಿಯು ರಾಷ್ಟ್ರ ಮತ್ತು ರಾಷ್ಟ್ರೀಯತೆಯ ಮೇಲೆ ಪರಿಣಾಮ ಬೀರಲು ಸಾಧ್ಯವಿಲ್ಲ ಎಂದು ಧನಕರ್ ಹೇಳಿದ್ದಾರೆ.
ಈ ಮೂಲಕ ದೇಶದಲ್ಲಿ ನಡೆಯುತ್ತಿರುವ ಏಕರೂಪ ನಾಗರಿಕ ಸಂಹಿತೆ ಚರ್ಚೆಗೆ ಉಪರಾಷ್ಟ್ರಪತಿ ಮಾತು ಮತ್ತಷ್ಟು ಬಲ ನೀಡಿದೆ.