ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೆಗಾ ಸ್ಟಾರ್ ಚಿರಂಜೀವಿ ಸಹೋದರ ನಾಗೇಂದ್ರ ಬಾಬು ಅವರ ಪುತ್ರಿ ನಿಹಾರಿಕಾ ಕೊನಿಡೇಲ ಮತ್ತು ಚೈತನ್ಯ ಜೊನ್ನಲಗಡ್ಡ ದಂಪತಿಗಳು ಔಪಚಾರಿಕವಾಗಿ ವಿಚ್ಛೇದನ ಪಡೆದಿದ್ದಾರೆ.
ಪತಿ ಚೈತನ್ಯ ಜೊನ್ನಲಗಡ್ಡ (Chaitanya Jonnalagadda) ಜೊತೆಗಿನ ದಾಂಪತ್ಯ ಜೀವನಕ್ಕೆ ಅವರು ಅಂತ್ಯ ಹಾಡಿದ್ದಾರೆ. ಆ ಮೂಲಕ ಅವರು ಹೊಸ ಜೀವನ ಆರಂಭಿಸುತ್ತಿದ್ದಾರೆ.
ದಂಪತಿ ಪರಸ್ಪರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ವಿಚ್ಛೇದನ ಪ್ರಕ್ರಿಯೆ ಪೂರ್ಣಗೊಂಡಿದೆ. ವಿಚ್ಛೇದನದ ತೀರ್ಪು ಕೂಡ ನೀಡಲಾಗಿದೆ ಎನ್ನುವ ಮಾಹಿತಿಗಳಿವೆ. ಆದರೆ, ದಂಪತಿ ವಿಚ್ಛೇದನಕ್ಕೆ ಕಾರಣ ತಿಳಿದುಬಂದಿಲ್ಲ.
ನಿಹಾರಿಕಾ ಕೊನೆಡೇಲ ಕಳೆದ ಕೆಲವು ಸಮಯಗಳಿಂದ ಪತಿ ಚೈತನ್ಯರಿಂದ ದೂರವಿದ್ದರು. ಇಬ್ಬರೂ ಒಪ್ಪಿಗೆಯ ಮೇರೆಗೆ ವಿಚ್ಛೇದನ ಅರ್ಜಿಯನ್ನು ಸಲ್ಲಿಕೆ ಮಾಡಲಾಗಿತ್ತು. ಹೈದರಾಬಾದ್‌ನ ಕುಕಟ್‌ಪಲ್ಲಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆ ಮಾಡಲಾಗಿತ್ತು.
2020ರ ಡಿಸೆಂಬರ್ 9 ರಂದು ರಾಜಸ್ಥಾನದಲ್ಲಿ ಅದ್ದೂರಿಯಾಗಿ ನಿಹಾರಿಕಾ ಮದುವೆ ನಡೆದಿತ್ತು. ಈ ಸಮಾರಂಭದಲ್ಲಿ ಅಲ್ಲು ಅರ್ಜುನ್, ರಾಮ್‌ಚರಣ್, ಪವನ್ ಕಲ್ಯಾಣ್ ಸೇರಿದಂತೆ ತೆಲುಗು ಚಿತ್ರರಂಗದ ಗಣ್ಯರು ಭಾಗವಹಿಸಿದ್ದರು.
2023ರ ಮಾರ್ಚ್‌ನಲ್ಲಿ ಚೈತನ್ಯ ಜೊನ್ನಲಗಡ್ಡ ಅವರು ತಮ್ಮ ಇನ್ಸ್‌ಟಾಗ್ರಾಮ್ ಖಾತೆಯಲ್ಲಿ ನಿಹಾರಿಕಾ ಅವರೊಂದಿಗಿನ ಚಿತ್ರಗಳನ್ನು ಡಿಲೀಟ್ ಮಾಡಿದಾಗ ಇವರಿಬ್ಬರು ಬೇರೆ ಬೇರೆ ಆಗುತ್ತಾರೆ ಎನ್ನುವ ಅನುಮಾನಗಳಿದ್ದವು. ಇದು ದೊಡ್ಡ ಮಟ್ಟದಲ್ಲಿ ಬ್ರೇಕಪ್ ವದಂತಿಗಳನ್ನು ಹುಟ್ಟುಹಾಕಿತ್ತು.
ರೇವ್ ಪಾರ್ಟಿ ದಾಳಿಯಲ್ಲಿ ಪೊಲೀಸ್ ವಶಕ್ಕೆ ನಿಹಾರಿಕಾ: 2022ರಲ್ಲಿ ಹೈದರಾಬಾದ್ ನ ಬಂಜಾರಾ ಹಿಲ್ಸ್ ನಲ್ಲಿ ಮಧ್ಯರಾತ್ರಿ ನಡೆಯುತ್ತಿದ್ದ ರೇವ್ ಪಾರ್ಟಿಮೇಲೆ ಪೊಲೀಸರು ನಡೆಸಿದ್ದ ದಾಳಿಯಲ್ಲಿ ನಿಹಾರಿಕಾ ಅವರನ್ನು ಪೊಲೀಸರು ಬಂಧಿಸಿದ್ದರು. ನಿಹಾರಿಕಾ ಪೊಲೀಸ್ ವಶಕ್ಕೆ ಪಡೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆಗಲೂ ಕೂಡ ನಿಹಾರಿಕಾ ಮತ್ತು ಚೈತನ್ಯ ನಡುವೆ ಯಾವುದೂ ಸರಿ ಇಲ್ಲ ಎನ್ನುವ ಸುದ್ದಿ ಕೇಳಿ ಬಂದಿತ್ತು.