ಇತ್ತೀಚಿನ ದಿನಗಳಲ್ಲಿ ಜೀವನಶೈಲಿ ಮತ್ತು ಆರೋಗ್ಯದ ದೃಷ್ಟಿಯಿಂದ ಅನೇಕರು ಮಾಂಸಾಹಾರವನ್ನು ತ್ಯಜಿಸಿ ಸಸ್ಯಾಹಾರದತ್ತ ಒಲವು ತೋರುತ್ತಿದ್ದಾರೆ. ಒಂದು ವೇಳೆ ನೀವು ಸತತವಾಗಿ ಮಾಂಸ ಸೇವನೆ ಮಾಡುವವರಾಗಿದ್ದು, ದಿಢೀರನೆ 30 ದಿನಗಳ ಕಾಲ ಮಾಂಸಾಹಾರದಿಂದ ದೂರವಿದ್ದರೆ ನಿಮ್ಮ ದೇಹದಲ್ಲಿ ಕಂಡುಬರುವ ಪ್ರಮುಖ ಬದಲಾವಣೆಗಳು ಇಲ್ಲಿವೆ:
ಉರಿಯೂತಕ್ಕೆ ಬ್ರೇಕ್
ಕೆಂಪು ಮಾಂಸ ಮತ್ತು ಸಂಸ್ಕರಿಸಿದ ಮಾಂಸದಲ್ಲಿ ಸ್ಯಾಚುರೇಟೆಡ್ ಕೊಬ್ಬಿನಂಶ ಹೆಚ್ಚಿರುತ್ತದೆ. ಇದು ದೇಹದಲ್ಲಿ ಒಳ ಉರಿಯೂತಕ್ಕೆ ಕಾರಣವಾಗಬಹುದು. ಮಾಂಸ ಸೇವನೆ ನಿಲ್ಲಿಸಿದಾಗ ದೇಹದಲ್ಲಿನ ಈ ಉರಿಯೂತದ ಮಟ್ಟ ಕಡಿಮೆಯಾಗಿ, ದೀರ್ಘಕಾಲದ ಕಾಯಿಲೆಗಳ ಅಪಾಯ ತಗ್ಗುತ್ತದೆ.
ಕರುಳಿನ ಆರೋಗ್ಯ ಮತ್ತು ಸುಲಭ ಜೀರ್ಣಕ್ರಿಯೆ
ಮಾಂಸಾಹಾರ ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಅದರ ಬದಲಿಗೆ ನಾರುಯುಕ್ತ ಧಾನ್ಯಗಳು ಮತ್ತು ತರಕಾರಿಗಳನ್ನು ಸೇವಿಸಿದಾಗ ನಿಮ್ಮ ಕರುಳಿನ ಆರೋಗ್ಯ ವೃದ್ಧಿಸುತ್ತದೆ. ಇದು ಗ್ಯಾಸ್ಟ್ರಿಕ್ ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದ ಕಿರಿಕಿರಿಗಳನ್ನು ಕಡಿಮೆ ಮಾಡುತ್ತದೆ.
ಮಲಬದ್ಧತೆಯಿಂದ ಮುಕ್ತಿ
ಮಾಂಸಾಹಾರದಲ್ಲಿ ನಾರಿನಂಶ ಇರುವುದಿಲ್ಲ. ಹಾಗಾಗಿ ಮಾಂಸದ ಬದಲು ದ್ವಿದಳ ಧಾನ್ಯ, ಸೊಪ್ಪು ಮತ್ತು ಹಣ್ಣುಗಳನ್ನು ಸೇವಿಸುವುದರಿಂದ ದೇಹಕ್ಕೆ ಹೇರಳವಾಗಿ ಫೈಬರ್ ದೊರೆತು, ಮಲಬದ್ಧತೆಯ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ.
ಶಕ್ತಿಯ ಮಟ್ಟದಲ್ಲಿ ಏರುಪೇರು
ಮಾಂಸಾಹಾರವನ್ನು ಬಿಟ್ಟ ಆರಂಭದ ದಿನಗಳಲ್ಲಿ ನಿಶ್ಯಕ್ತಿ ಅಥವಾ ಬೇಗ ದಣಿದ ಅನುಭವವಾಗಬಹುದು. ಏಕೆಂದರೆ ಮಾಂಸವು ಪ್ರೋಟೀನ್ ಮತ್ತು ಕಬ್ಬಿಣದಂಶದ ದೊಡ್ಡ ಮೂಲವಾಗಿರುತ್ತದೆ. ಇದನ್ನು ಸರಿದೂಗಿಸಲು ಪರ್ಯಾಯ ಸಸ್ಯಾಹಾರಿ ಪ್ರೋಟೀನ್ ಸೇವನೆ ಅತ್ಯಗತ್ಯ.

