ಮಣಿಪುರದಲ್ಲಿ ಭದ್ರತಾ ಶಿಬಿರಕ್ಕೆ ನುಗ್ಗಿದ ಗುಂಪು, ಶಸ್ತ್ರಾಸ್ತ್ರ ದೋಚಲು ಯತ್ನ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಣಿಪುರದ ತೌಬಲ್ ಜಿಲ್ಲೆಯ ಭಾರತೀಯ ಮೀಸಲು ಪಡೆ (ಐಆರ್‌ಬಿ) ಶಿಬಿರಕ್ಕೆ ನುಗ್ಗಿ ಶಸ್ತ್ರಾಸ್ತ್ರ ದೋಚಲು ಗುಂಪೊಂದು ಯತ್ನಿಸಿದ ಘಟನೆ ಮಂಗಳವಾರ ನಡೆದಿದೆ. ಈ ವೇಳೆ ಭದ್ರತಾ ಪಡೆ ಮತ್ತು ಗುಂಪಿನ ನಡುವೆ ಘರ್ಷಣೆ ಉಂಟಾಗಿದ್ದು, ಗುಂಡಿನ ಚಕಮಕಿಯಲ್ಲಿ ಓರ್ವ ಯುವಕ ಬಲಿಯಾಗಿದ್ದಾನೆ. ಅಸ್ಸಾಂ ರೈಫಲ್ಸ್‌ ಯೋಧನ ಕಾಲಿಗೆ ಗುಂಡು ತಗುಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳವಾರ ಗುಂಪೊಂದು ಖಂಗಾಬೊಕ್ ಪ್ರದೇಶದಲ್ಲಿರುವ 3ನೇ ಐಆರ್‌ಬಿ ಬೆಟಾಲಿಯನ್‌ನ ಶಿಬಿರಕ್ಕೆ ನುಗ್ಗಿ ಶಸ್ತ್ರಾಸ್ತ್ರ ಮತ್ತು ಮದ್ದು ಗುಂಡುಗಳನ್ನು ದೋಚಲು ಪ್ರಯತ್ನಿಸಿತು. ತಕ್ಷಣವೇ ಎಚ್ಚೆತ್ತುಕೊಂಡ ಪಡೆಗಳು ಗುಂಪನ್ನು ನಿಯಂತ್ರಿಸಲು ಪ್ರಯತ್ನಿಸಿವೆ. ಪರಿಸ್ಥಿತಿಯನ್ನು ಹತೋಟಿಗೆ ತರುವ ಉದ್ದೇಶದಿಂದ ಗುಂಪಿನ ಮೇಲೆ ಮೊದಲಿಗೆ ಅಶ್ರುವಾಯು ಶೆಲ್‌ಗಳು ಮತ್ತು ರಬ್ಬರ್ ಬುಲೆಟ್‌ಗಳನ್ನು ಹಾರಿಸಲಾಗಿದೆ. ಆದರೆ ಶಸ್ತ್ರಸಜ್ಜಿತ ದಾಳಿಕೋರ ಗುಂಪು ಗುಂಡು ಹಾರಿಸುತ್ತಿದ್ದಂತೆ, ಭದ್ರತಾ ಪಡೆಗಳು ಕೂಡ ಪ್ರತಿದಾಳಿ ನಡೆಸಿದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶಸ್ತ್ರಾಸ್ತ್ರಗಳನ್ನು ದೋಚಲು ಬಂದಿದ್ದ ಗುಂಪು ಶಿಬಿರದತ್ತ ಧಾವಿಸುವ, ಹೋಗುವ ಎಲ್ಲ ರಸ್ತೆಗಳನ್ನು ನಿರ್ಬಂಧಿಸಿತ್ತು. ಶಿಬಿರಕ್ಕೆ ತೆರಳುತ್ತಿದ್ದ ಅಸ್ಸಾಂ ರೈಫಲ್ಸ್ ತಂಡದ ಮೇಲೆಯೂ ದಾಳಿ ಮಾಡಿದೆ. ಇದಕ್ಕೆ ಪ್ರತಿಯಾಗಿ ಅಸ್ಸಾಂ ರೈಫಲ್ಸ್ ಪಡೆ ಕೂಡ ಪ್ರತಿದಾಳಿ ನಡೆಸಿದೆ. ಈ ವೇಳೆ ಯೋಧರೊಬ್ಬರ ಕಾಲಿಗೆ ಗುಂಡೇಟು ತಗುಲಿದೆ. ಈ ವೇಳೆ ಸೇನಾ ವಾಹನಗಳು ಬೆಂಕಿಗೆ ಆಹುತಿಯಾದವು ಎಂದು ಹೇಳಿದರು.

ಘರ್ಷಣೆಯಲ್ಲಿ ರೊನಾಲ್ಡೊ ಎಂಬ ವ್ಯಕ್ತಿಗೆ ಗುಂಡು ತಾಕಿದೆ. ಮೊದಲಿಗೆ ಆ ವ್ಯಕ್ತಿಯನ್ನು ತೌಬಲ್ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಪರಿಸ್ಥಿತಿ ಗಂಭೀರವಾಗಿದ್ದರಿಂದ ಇಂಫಾಲ್‌ನ ಆಸ್ಪತ್ರೆಗೆ ದಾಖಲಿಸಲು ನಿರ್ಧರಿಸಲಾಯಿತು. ಆಸ್ಪತ್ರೆಗೆ ತೆರಳುವ ಮಾರ್ಗದ ಮಧ್ಯೆ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದರು.

ಘರ್ಷಣೆಯಲ್ಲಿ ಇನ್ನೂ ಹತ್ತು ಮಂದಿ ಗಾಯಗೊಂಡಿದ್ದು, ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!