ಹೊಸದಿಗಂತ ವರದಿ, ಅಂಕೋಲಾ:
ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಭಟ್ಕಳದ ಮುಂಡಳ್ಳಿಯಲ್ಲಿ 193 ಮೀ.ಮಿ ಮಳೆ ಸುರಿದಿದ್ದು ಬೇಳ್ಕೆ, ಸಾಲ್ಕೋಡ್, ಮುಂಡಳ್ಳಿ,ಜಾಲಿ, ಬೇಂಗ್ರೆ ಭಾಗಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದೆ, ಹೊನ್ನಾವರ ತಾಲೂಕಿನ ಸಾಲ್ಕೋಡ್, ಹೊಸಾಕುಳಿ, ಹಡಿನಬಾಳ ಭಾಗಗಳಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗಿದ್ದು ಕೆಲವಡೆ ತೋಟಗಳಿಗೆ ಹಳ್ಳದ ನೀರು ನುಗ್ಗಿ ಹಾನಿ ಸಂಭವಿಸಿದೆ.
ಅಂಕೋಲಾದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದ್ದು ನದಿ ಪಾತ್ರದ ಕೃಷಿ ಭೂಮಿಗಳಲ್ಲಿ ನೀರು ತುಂಬಿಕೊಂಡಿದೆ.
ಪಟ್ಟಣದ ಅಜ್ಜಿಕಟ್ಟಾ ವಾರ್ಡಿನಲ್ಲಿ ಕೆಲವು ಕಂಪೌಂಡುಗಳಲ್ಲಿ ನೀರು ತುಂಬಿ ಮನೆಯೊಳಗೂ ನೀರು ಪ್ರವೇಶಿಸಿದೆ.
ತಾಲೂಕಿನ ಜೀವನದಿ ಗಂಗಾವಳಿ ಜೀವಕಳೆ ತುಂಬಿ ಹರಿಯತೊಡಗಿದ್ದು ಸಮುದ್ರದಲ್ಲಿ ಅಲೆಗಳ ರೌದ್ರ ನರ್ತನ ಕಂಡು ಬಂದಿದೆ.
ಕಾರವಾರ ತಾಲೂಕಿನ ಶಿರವಾಡದಲ್ಲಿ 188 ಮೀ.ಮಿ ಮಳೆಯಾಗಿದ್ದು ಅರ್ಗಾ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ನೀರು ತುಂಬಿ ಮನೆಗಳಿಗೆ ನೀರು ಪ್ರವೇಶಿಸಿದೆ.
ಕಾರವಾರದ ಅರ್ಗಾದಲ್ಲಿ ಮನೆಯಂಗಳದಲ್ಲಿ ತುಂಬಿದ ನೀರಿನಲ್ಲಿ ಕಾಲು ಜಾರಿ ಬಿದ್ದು ತಾರಾಮತಿ ನಾಯ್ಕ (85) ಎನ್ನುವವರು ಮೃತ ಪಟ್ಟಿದ್ದಾಳೆ.
ಪುರಾಣ ಪ್ರಸಿದ್ಧ ಗೋಕರ್ಣದ ರಸ್ತೆಗಳಲ್ಲಿ ನೀರು ತುಂಬಿ ಪ್ರವಾಸಿಗರು ಸಮಸ್ಯೆ ಎದುರಿಸಿದ್ದು , ಗೋಕರ್ಣ ಸಮೀಪ ಹಿತ್ತಲಮಕ್ಕಿ ಬಳಿ ನೀರು ತುಂಬಿ ರಾಜ್ಯ ಹೆದ್ದಾರಿಯಲ್ಲಿ ಕೆಲ ಕಾಲ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ.
ಭಟ್ಕಳ ಮತ್ತು ಹೊನ್ನಾವರದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ತುಂಬಿದ ಘಟನೆಗಳು ನಡೆದಿದ್ದು ಕುಮಟಾ ಗ್ರಾಮೀಣ ಪ್ರದೇಶದ ಕೆಲವಡೆ ರಸ್ತೆ ಬದಿ ಗುಡ್ಡ ಕುಸಿದಿದೆ.