ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರದೇಶದಲ್ಲಿ ಬುಡಕಟ್ಟು ವ್ಯಕ್ತಿಯೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಘಟನೆ ದೇಶಾದ್ಯಂತ ಸಂಚಲನ ಮೂಡಿಸಿದ್ದು ಗೊತ್ತೇ ಇದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಪ್ರತಿಕ್ರಿಯಿಸಿ, ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ಪೊಲೀಸರು ಆದೇಶಿಸಿದ್ದಾರೆ. ಆರೋಪಿಯನ್ನು ಪ್ರವೇಶ್ ಶುಕ್ಲಾ ಎಂದು ಗುರುತಿಸಲಾಗಿದ್ದು, ನಿನ್ನೆ (5) ರಂದು ಬಂಧಿಸಲಾಯಿತು. ಬುಧವಾರ ಸಂಜೆ ಪ್ರವೇಶ್ ಶುಕ್ಲಾ ಅವರ ಮನೆಯನ್ನು ಬುಲ್ಡೋಜರ್ನಿಂದ ಕೆಡವಲಾಯಿತು. ಇದೀಗ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಸಂತ್ರಸ್ತನ ಪಾದ ತೊಳೆದು ಕ್ಷಮೆ ಯಾಚಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಗುರುವಾರ ಸಿಎಂ ಚೌಹಾಣ್ ಅವರು ಸಂತ್ರಸ್ತನನ್ನು ಭೋಪಾಲ್ನಲ್ಲಿರುವ ತಮ್ಮ ನಿವಾಸಕ್ಕೆ ಸ್ವಾಗತಿಸಿ, ಕುರ್ಚಿಯ ಮೇಲೆ ಕುಳ್ಳಿರಿಸಿ ಸಿಎಂ ಅವರೇ ಸಂತ್ರಸ್ತನ ಕಾಲು ತೊಳೆದು ಕ್ಷಮೆ ಯಾಚಿಸಿದರು. ಬಳಿಕ ಸಿಎಂ ಚೌಹಾಣ್ ಮಾತನಾಡಿ.. ಘಟನೆಗೆ ಸಂಬಂಧಿಸಿದಂತೆ ವೀಡಿಯೊ ನನಗೆ ದುಃಖ ತಂದಿದೆ. ಇದಕ್ಕಾಗಿ ಕ್ಷಮೆಯಾಚಿಸುತ್ತೇನೆ. ನನಗೆ ಜನರು ದೇವರ ಸಮಾನ ಎಂದು ಈ ಮೂಲಕ ಸಿಎಂ ಹೇಳಿದರು. ಈ ರೀತಿಯ ದುಷ್ಕೃತ್ಯಗಳನ್ನು ಸಹಿಸುವುದಿಲ್ಲ ಮತ್ತು ರಾಜ್ಯದ ಪ್ರತಿಯೊಬ್ಬ ನಾಗರಿಕನ ಗೌರವವು ತನ್ನ ಗೌರವಕ್ಕೆ ಸಮಾನ ಎಂದರು.
ಈ ಹೇಯ ಘಟನೆ ತಡವಾಗಿ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು ಆರೋಪಿ ಪ್ರವೇಶ್ ಶುಕ್ಲಾ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.