ಚಳಿಗಾಲ ಬಂದೊಡನೆ ಚರ್ಮದ ಜೊತೆಗೂ ಕೂದಲಿಗೂ ಸಮಸ್ಯೆಗಳು ಶುರುವಾಗುತ್ತವೆ. ಒಣಗುವುದು, ಉದುರುವುದು, ಶೈನ್ ಕಳೆದುಕೊಳ್ಳುವುದು ಇವೆಲ್ಲವೂ ಸಾಮಾನ್ಯ. ತಂಪಾದ ವಾತಾವರಣದಲ್ಲಿ ಕೂದಲಿನ ನೈಸರ್ಗಿಕ ತೇವಾಂಶ ಕಡಿಮೆಯಾಗುತ್ತದೆ. ಆದರೆ ಸರಿಯಾದ ಕಾಳಜಿ ತೆಗೆದುಕೊಂಡರೆ ಚಳಿಗಾಲದಲ್ಲೂ ಆರೋಗ್ಯಕರ, ಬಲಿಷ್ಠ ಕೂದಲನ್ನು ಕಾಪಾಡಿಕೊಳ್ಳಬಹುದು. ಅದಕ್ಕಾಗಿ ದೊಡ್ಡ ಪ್ರಯತ್ನಗಳ ಅವಶ್ಯಕತೆಯೇ ಇಲ್ಲ ದಿನನಿತ್ಯದ ಕೆಲ ಸಣ್ಣ ಅಭ್ಯಾಸಗಳೇ ಸಾಕು.
- ಎಣ್ಣೆ ಮಸಾಜ್ ಅನಿವಾರ್ಯ: ಚಳಿಗಾಲದಲ್ಲಿ ಕೂದಲು ತೊಳೆಯುವ ಮೊದಲು ಸ್ವಲ್ಪ ಎಣ್ಣೆಯನ್ನು ಕುದಿಸಿ ತಣ್ಣಗಾಗಿಸಿ ತಲೆಗೆ ಹಚ್ಚಿ ಮಸಾಜ್ ಮಾಡಬೇಕು. ಕೂದಲು ಎಣ್ಣೆಯುಕ್ತವಾಗಿದ್ದರೆ ವಾರಕ್ಕೆ ಮೂರು ಬಾರಿ, ಒಣ ಕೂದಲಿದ್ದರೆ ವಾರಕ್ಕೆ ಎರಡು ಬಾರಿ ಹೀಗೆ ಮಾಡುವುದು ಉತ್ತಮ. ಇದು ತಲೆಚರ್ಮಕ್ಕೆ ಪೋಷಣೆ ನೀಡುತ್ತದೆ.
- ಸರಿಯಾದ ಶಾಂಪೂ ಆಯ್ಕೆ: ಸೌಮ್ಯ ಮತ್ತು ಮಾಯಿಶ್ಚರೈಸಿಂಗ್ ಶಾಂಪೂಗಳನ್ನು ಬಳಸಬೇಕು. ಸಲ್ಫೇಟ್‌ಗಳಂತಹ ಕಠಿಣ ರಾಸಾಯನಿಕಗಳಿಲ್ಲದ ಶಾಂಪೂಗಳು ಕೂದಲಿನ ತೇವಾಂಶವನ್ನು ಕಾಪಾಡುತ್ತವೆ. ತೆಂಗಿನ ಎಣ್ಣೆ, ಮೆಂತ್ಯೆಯಂತಹ ನೈಸರ್ಗಿಕ ಪದಾರ್ಥಗಳು ಕೂದಲಿಗೆ ಒಳ್ಳೆಯದು.
- ಕಂಡಿಷನರ್ ಬಳಕೆ ಮರೆಯಬೇಡಿ: ಶಾಂಪೂ ಮಾಡಿದ ನಂತರ ಕಂಡಿಷನರ್ ಬಳಸುವುದರಿಂದ ಕೂದಲು ಮೃದುವಾಗುತ್ತದೆ ಮತ್ತು ಮುರಿಯುವುದನ್ನು ತಡೆಯುತ್ತದೆ. ವಿಶೇಷವಾಗಿ ಚಳಿಗಾಲದಲ್ಲಿ ಇದು ಬಹಳ ಅಗತ್ಯ.
- ಟವೆಲ್ ಬಳಕೆಯಲ್ಲಿ ಜಾಗ್ರತೆ: ತಲೆ ಸ್ನಾನದ ನಂತರ ಕೂದಲನ್ನು ಗಟ್ಟಿಯಾಗಿ ಟವೆಲ್‌ನಿಂದ ಒರೆಸಬಾರದು. ಇದು ಕೂದಲು ಉದುರುವಿಕೆಗೆ ಕಾರಣವಾಗಬಹುದು. ಬದಲಾಗಿ ಮೃದುವಾಗಿ ಒರೆಸಿ ಅಥವಾ ಹೇರ್ ಡ್ರೈಯರ್ ಅನ್ನು ಕಡಿಮೆ ಉಷ್ಣತೆಯಲ್ಲಿ ಬಳಸಿ.

