ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ ಎರಡು ದಿನಗಳ ಕಾಲ ಉತ್ತರ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ಗೋರಖ್ಪುರ ಮತ್ತು ವಾರಣಾಸಿಗೆ ಭೇಟಿ ನೀಡಲಿದ್ದು, ಬಹು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಲಿದ್ದಾರೆ.
ಪ್ರಧಾನಿ ಮೋದಿ ಅವರು ಗೋರಖ್ಪುರ ರೈಲು ನಿಲ್ದಾಣದಿಂದ ಎರಡು ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳಿಗೆ ಚಾಲನೆ ನೀಡಲಿದ್ದಾರೆ.
ಪ್ರಧಾನಿ ಮೋದಿಯವರ ಪ್ರವಾಸದ ವೇಳಾಪಟ್ಟಿ:
ಪ್ರಧಾನಿ ಮೋದಿ ಇಂದು ಮಧ್ಯಾಹ್ನ 2.30ರ ಸುಮಾರಿಗೆ ಗೋರಖ್ಪುರ ತಲುಪಲಿದ್ದಾರೆ. ಆಧ್ಯಾತ್ಮಿಕ ಹಿಂದೂ ಗ್ರಂಥಗಳ ವಿಶ್ವದ ಅತಿದೊಡ್ಡ ಪ್ರಕಾಶಕ ಗೀತಾ ಪ್ರೆಸ್ನ ಶತಮಾನೋತ್ಸವದ ಆಚರಣೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭವನ್ನು ಆಚರಿಸಲು ವಿಶೇಷವಾಗಿ ವಿನ್ಯಾಸಗೊಳಿಸಲಾದ ಚಿತ್ರಮಯ ಶಿವ ಪುರಾಣ ಗ್ರಂಥವನ್ನು ಮೋದಿಯವರು ಬಿಡುಗಡೆ ಮಾಡಲಿದ್ದಾರೆ.
ಗೀತಾ ಪ್ರೆಸ್ನಲ್ಲಿರುವ ಲೀಲಾ ಚಿತ್ರ ದೇವಸ್ಥಾನಕ್ಕೂ ಪ್ರಧಾನಿ ಭೇಟಿ ನೀಡಲಿದ್ದಾರೆ. ಗೀತಾ ಪ್ರೆಸ್ಗೆ 2021ರ ಗಾಂಧಿ ಶಾಂತಿ ಪ್ರಶಸ್ತಿಯನ್ನು ನೀಡಲಾಗಿದ್ದು, ಈ ಕಾರ್ಯಕ್ರಮವು ವಿಶೇಷವಾಗಿದೆ. ಸುಮಾರು 498 ಕೋಟಿ ರೂಪಾಯಿಗಳ ಅಂದಾಜು ವೆಚ್ಚದಲ್ಲಿ ಪೂರ್ಣಗೊಳ್ಳುವ ಗೋರಖ್ಪುರ ರೈಲು ನಿಲ್ದಾಣದ ಪುನರಾಭಿವೃದ್ಧಿ ಕಾಮಗಾರಿಯ ಶಂಕುಸ್ಥಾಪನೆಯನ್ನೂ ಪ್ರಧಾನಿ ನೆರವೇರಿಸಲಿದ್ದಾರೆ.
ಗೋರಖ್ಪುರ-ಲಕ್ನೋ ಮತ್ತು ಜೋಧ್ಪುರ-ಅಹಮದಾಬಾದ್ (ಸಾಬರಮತಿ) ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳಿಗೆ ಪ್ರಧಾನಮಂತ್ರಿ ಚಾಲನೆ ನೀಡಲಿದ್ದಾರೆ.
ವಾರಣಾಸಿಯಲ್ಲಿ ಪ್ರಧಾನಮಂತ್ರಿಯವರು ಸಂಜೆ 5 ಗಂಟೆಗೆ ಸುಮಾರು 12.100 ಕೋಟಿ ರೂಪಾಯಿಗಳ ಬಹುವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ವಿದ್ಯುದೀಕರಣ ಅಥವಾ ದ್ವಿಗುಣಗೊಳಿಸುವಿಕೆ ಪೂರ್ಣಗೊಂಡ ಮೂರು ರೈಲು ಮಾರ್ಗಗಳನ್ನು ಅವರು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಇದು ಉತ್ತರ ಪ್ರದೇಶದ ರೈಲು ಮಾರ್ಗಗಳ 100 ಪ್ರತಿಶತ ವಿದ್ಯುದ್ದೀಕರಣವನ್ನು ಪೂರ್ಣಗೊಳಿಸುತ್ತದೆ.
ವಾರಣಾಸಿಯಲ್ಲಿ ಮಣಿಕರ್ಣಿಕಾ ಮತ್ತು ಹರಿಶ್ಚಂದ್ರ ಘಾಟ್ಗಳ ಮರುವಿನ್ಯಾಸ ಮತ್ತು ಪುನರಾಭಿವೃದ್ಧಿಯ ಶಂಕುಸ್ಥಾಪನೆಯನ್ನೂ ಪ್ರಧಾನಿ ನೆರವೇರಿಸಲಿದ್ದಾರೆ. ಮೋದಿ ಅವರು ತಮ್ಮ ಸಂಸದೀಯ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಸಭೆ ನಡೆಸಲಿದ್ದಾರೆ.