ಹೊಸದಿಗಂತ ವರದಿ ಬಂಟ್ವಾಳ:
ತಾಲೂಕಿನ ಸಜೀಪಮುನ್ನೂರು ಗ್ರಾಮದ ನಂದಾವರ ಎಂಬಲ್ಲಿ ಶುಕ್ರವಾರ ಮುಂಜಾನೆ ಮನೆಯೊಂದರ ಮೇಲೆ ಗುಡ್ಡ ಕುಸಿದು ಬಿದ್ದು, ಮನೆಯೊಳಗೆ ಸಿಲುಕಿಕೊಂಡಿದ್ದ ಇಬ್ಬರು ಮಹಿಳೆಯರ ಪೈಕಿ ಓರ್ವರನ್ನು ರಕ್ಷಿಸಲಾಗಿದ್ದು, ಮತ್ತೋರ್ವ ಮಹಿಳೆ ಮೃತಪಟ್ಟ ಘಟನೆ ನಡೆದಿದೆ.
ನಂದಾವರ ನಿವಾಸಿ ಮಹಮ್ಮದ್ ಅವರ ಪತ್ನಿ ಝರೀನಾ(49) ಹಾಗೂ ಶಫಾ(20) ಮನೆಯಡಿಯಲ್ಲಿ ಸಿಲುಕಿ ಹಾಕಿಕೊಂಡವರಾಗಿದ್ದು,ಈ ಪೈಕಿ ಸಫಾ ಅವರನ್ನು ರಕ್ಷಿಸಲಾಗಿದ್ದು, ಝರಿನಾ ಅವರು ಮೃತಪಟ್ಟಿದ್ದಾರೆ.
ಸತತ ಪ್ರಯತ್ನ ಫಲವಾಗಿ ಶಫಾ ಅವರನ್ನು ರಕ್ಷಿಸುವಲ್ಲಿ ಯಶಸ್ವಿಯಾದರೆ ಝರಿನಾ ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ.
ಕೆಲವು ಗಂಟೆಗಳ ಕಾಲ ಸ್ಥಳೀಯರು ಸಹಕಾರದಲ್ಲಿ ಬಂಟ್ವಾಳ ಅಗ್ನಿಶಾಮಕ ಠಾಣಾ ಸಿಬ್ಬಂದಿಗಳು, ಪೊಲೀಸರು, ರಕ್ಷಣಾ ಕಾರ್ಯ ದಲ್ಲಿ ತೊಡಗಿದ್ದರು. ತಹಶೀಲ್ದಾರ್ ಎಸ್.ಬಿ.ಕೂಡಲಗಿ ಹಾಗೂ ಸಿಬ್ಬಂದಿಗಳು ಸ್ಥಳದಲ್ಲಿದ್ದಾರೆ.
ಬಜೆಟ್ ಅಧಿವೇಶನದ ಪ್ರಯುಕ್ತ ಬೆಂಗಳೂರಿನಲ್ಲಿ ವಾಸ್ತವ್ಯವಿರುವ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಘಟನೆಯ ಮಾಹಿತಿ ಪಡೆದು ತಹಶೀಲ್ದಾರರನ್ನು ಕರೆ ಮಾಡಿ ಸಂಪರ್ಕಿಸಿ ರಕ್ಷಣಾ ಕಾರ್ಯ ಹಾಗೂ ಸೂಕ್ತ ಕ್ರಮಕ್ಕೆ ಸೂಚಿಸಿದ್ದಾರೆ.