ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಜರಾತ್ ಹೈಕೋರ್ಟ್ ತೀರ್ಪಿನ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೆ ಡಿಕೆ ಶಿವಕುಮಾರ್ ಬಿಜೆಪಿ ವಿರುದ್ಧ ಹೋರಾಟಕ್ಕೆ ಕರೆ ಕೊಟ್ಟಿರುವುದನ್ನು ನೋಡಿದರೆ ರಾಹುಲ್ ಗಾಂಧಿಗೂ ಡಿಕೆಶಿಗೂ ಹೋಲಿಕೆ ಇದೆ, ಇಬ್ಬರದ್ದೂ ಎಳಸುತನದ ರಾಜಕೀಯ ಎಂಬುದು ಸಾಬೀತಾಗುತ್ತಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣ ಗೌಡ ತಿಳಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಟೀಕೆ ಮಾಡುವ ಭರದಲ್ಲಿ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ದೇಶದಲ್ಲಿರುವ ಮೋದಿ ಹೆಸರಿನವರು ಎಲ್ಲರೂ ಒಂದೇ ಎನ್ನುವ ರೀತಿ ಟೀಕಿಸಿದ್ದರು. ಅದರ ವಿರುದ್ಧವಾಗಿ ಗುಜರಾತಿನ ಸೂರತ್ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಲಾಗಿತ್ತು. ರಾಹುಲ್ ಗಾಂಧಿಯವರನೇ ನೇರವಾಗಿ ಕೋರ್ಟಿಗೆ ಬರುವಂತೆ ಸೂಚಿಸಲಾಗಿತ್ತು. ರಾಹುಲ್ ಗಾಂಧಿಯವರು ತಾವು ಮಾಡಿದ ಆಪಾದನೆಗೆ ಸರಿಯಾಗಿ ಸಮಜಾಯಿಷಿ, ಉತ್ತರ ನೀಡಲು ಸಾಧ್ಯವಾಗದೆ ಸೂರತ್ ನ್ಯಾಯಾಲಯವು ಸಂಸದ ಸ್ಥಾನವನ್ನು ವಜಾಗೊಳಿಸಿ ಎರಡು ವರ್ಷ ಕಠಿಣ ಶಿಕ್ಷೆಯನ್ನು ನೀಡಲಾಗಿತ್ತು ಎಂದು ಅವರು ವಿವರಿಸಿದರು.
ಇದರ ವಿರುದ್ಧವಾಗಿ ರಾಹುಲ್ ಗಾಂಧಿಯವರು ಗುಜರಾತ್ ಹೈಕೋರ್ಟಿನ ಮೊರೆ ಹೋಗಿದ್ದರು. ಗುಜರಾತ್ ಹೈಕೋರ್ಟ್ ಇಂದು ರಾಹುಲ್ ಗಾಂಧಿಯವರ ಪರ ವಾದವನ್ನು ಆಲಿಸಿ ಗುಜರಾತಿನ ಕೆಳ ನ್ಯಾಯಾಲಯ ಕೊಟ್ಟ ತೀರ್ಪನ್ನು ಎತ್ತಿ ಹಿಡಿದಿದೆ. ಅಲ್ಲದೆ, ಶಿಕ್ಷೆ ಕಡಿಮೆ ಮಾಡುವಂತೆ ಕೋರಿದ ಇವರ ಮನವಿಯನ್ನು ತಿರಸ್ಕರಿಸಿದೆ. ಗುಜರಾತಿನ ಹೈಕೋರ್ಟ್ ತೀರ್ಪಿಗೂ ಬಿಜೆಪಿಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂಬುದೂ ಗಮನಾರ್ಹ.
ಬಿಜೆಪಿ ವಿರುದ್ಧ ಪ್ರತಿಭಟನೆಗೆ ಕರೆ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಹೈಕೋರ್ಟಿನ ತೀರ್ಪಿನ ವಿರುದ್ಧವಾಗಿ ಸುಪ್ರೀಂ ಕೋರ್ಟಿಗೆ ಮನವಿ ಸಲ್ಲಿಸಲು ಅವಕಾಶವಿದೆ. ಆದರೆ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸಿನ ಸೋನಿಯಾ ಕುಟುಂಬದ ಜೊತೆ ಆಪ್ತನೆಂದು ತೋರಿಸಿಕೊಳ್ಳಲು ಕಾಂಗ್ರೆಸ್ಸಿನ ಎಲ್ಲಾ ಶಾಸಕರನ್ನು ಕರೆದು ಇಂದು ವಿಕಾಸ ಸೌಧ ಮತ್ತು ವಿಧಾನಸೌಧದ ಮಧ್ಯೆ ಇರುವ ಗಾಂಧಿ ಪ್ರತಿಮೆ ಬಳಿ ಮಧ್ಯಾಹ್ನ 3:30ಕ್ಕೆ ಬಿಜೆಪಿ ವಿರುದ್ಧವಾಗಿ ಹೋರಾಟ ಮಾಡಲು ಸತ್ಯಾಗ್ರಹಕ್ಕೆ ಕರೆಕೊಟ್ಟಿದ್ದಾರೆ. ಇದು ಅವರ ಎಳಸುತನದ ರಾಜಕೀಯವನ್ನು ಎತ್ತಿ ತೋರಿಸುವಂತಿದೆ ಎಂದು ಟೀಕಿಸಿದ್ದಾರೆ.
ಇಬ್ಬರದ್ದೂ ಎಳಸುತನದ ರಾಜಕೀಯ
ರಾಹುಲ್ ಗಾಂಧಿಯವರು ರಾಜಕೀಯದಲ್ಲಿ ಹಲವು ಬಾರಿ ತಮ್ಮ ಎಡಬಿಡಂಗಿತನ ಮತ್ತು ಎಳಸುತನವನ್ನು ಪ್ರದರ್ಶನ ಮಾಡಿದ್ದಾರೆ. ಈ ಹಿಂದೆ ಡಿ.ಕೆ.ಶಿವಕುಮಾರ್ ಅವರಿಗೆ ಇ.ಡಿ, ಆದಾಯ ತೆರಿಗೆ ಇಲಾಖೆಯಂಥ ತನಿಖಾ ಸಂಸ್ಥೆಗಳು ನೋಟಿಸ್ ಕೊಟ್ಟಾಗ, ವಿಚಾರಣೆಗೆ ಕರೆದಾಗ ಅವುಗಳನ್ನು ಎದುರಿಸಲಾಗದೆ ತಮ್ಮಲ್ಲಿರೋ ತಪ್ಪನ್ನು ಮುಚ್ಚಿಕೊಳ್ಳಲು ನಾನು ಯಾವುದೇ ತಪ್ಪನ್ನು ಮಾಡಿಲ್ಲ ಎಂದು ಸಮಜಾಯಿಷಿ ನೀಡಿದ್ದರು.
ಬಿಜೆಪಿಯವರು ದುರುದ್ದೇಶದಿಂದ ನನ್ನ ಮೇಲೆ ಮೊಕದ್ದಮೆ ಹೂಡಿದ್ದಾರೆ. ಬಿಜೆಪಿಯವರು ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂಬ ಬಾಲಿಶ ರಾಜಕೀಯ ಟೀಕೆಗಳನ್ನು ಮಾಡುತ್ತಿದ್ದರು ಎಂದಿರುವ ಅವರು, ರಾಹುಲ್ ಗಾಂಧಿ ನಡೆದುಕೊಳ್ಳುತ್ತಿರುವ ರೀತಿ ನೀತಿಯನ್ನು ದೇಶದ ಜನ ತಿಳಿದುಕೊಂಡಿದ್ದಾರೆ. ಕಾಂಗ್ರೆಸ್ನವರು ಯಾವುದೇ ತನಿಖಾ ಸಂಸ್ಥೆಗಳನ್ನು ನಂಬುವುದಿಲ್ಲ. ಡಾಕ್ಟರ್ ಬಾಬಾಸಾಹೇಬ ಬಿ.ಆರ್ ಅಂಬೇಡ್ಕರ್ ಅವರು ಬರೆದ ಸಂವಿಧಾನದ ಬಗ್ಗೆಯೂ ಅವರಿಗೆ ಗೌರವವಿಲ್ಲ. ನ್ಯಾಯಾಲಯದ ತೀರ್ಪುಗಳನ್ನು ಗೌರವಿಸುವುದೇ ಇಲ್ಲ ಎಂದು ಆಕ್ಷೇಪಿಸಿದ್ದಾರೆ.
ಮುಖ್ಯವಾಗಿ ಮತದಾರರು ಇವೆಲ್ಲವನ್ನೂ ಗಮನಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದೇ ಮತದಾರರು ನಿಮಗೆ ಸರಿಯಾದ ತೀರ್ಪನ್ನು ಕೊಡಲಿದ್ದಾರೆ ಎಂದು ಬಿಜೆಪಿ ಎಚ್ಚರಿಸುವುದಾಗಿ ಅವರು ತಿಳಿಸಿದ್ದಾರೆ.