ಸಿದ್ದರಾಮಯ್ಯ ಮಂಡಿಸಿದ ರಾಜ್ಯ ಬಜೆಟ್ ನಿರಾಶಾದಾಯಕ, ಪ್ರಗತಿಹೀನ ಬಜೆಟ್ : ನಳಿನ್ ಕುಮಾರ್ ಕಟೀಲ್ ಟೀಕೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ರಾಜ್ಯ ಬಜೆಟ್ ಒಂದು ರೀತಿ ಪ್ರತೀಕಾರದ ಬಜೆಟ್. ಈ ಬಜೆಟ್ ರಾಜ್ಯ ಸರಕಾರದ್ದೇ ಆದರೂ ಕೇಂದ್ರ ಬಿಜೆಪಿ ಸರಕಾರವನ್ನು ಗುರಿ ಮಾಡಿರುವುದು ಕಂಡುಬರುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಟೀಕಿಸಿದ್ದಾರೆ.

ಇದೊಂದು ನಿರಾಶಾದಾಯಕ, ಪ್ರಗತಿಹೀನ ಬಜೆಟ್ ಎಂದಿರುವ ಅವರು, ಬಜೆಟ್ ಮಂಡಿಸುವ ವೇಳೆ ಕೇಂದ್ರ ಸರಕಾರ, ಮೋದಿಜಿ ಅವರನ್ನು ಟೀಕಿಸುವುದಕ್ಕಾಗಿಯೇ ಈ ಅವಕಾಶ ಉಪಯೋಗ ಮಾಡಿಕೊಂಡಿದ್ದಾರೆ. ರಾಜ್ಯಗಳ ಒಕ್ಕೂಟದ ಒಳಗಡೆ ಕೇಂದ್ರದ ಜೊತೆ ಸಂಘರ್ಷ, ಮುಂದಿನ ಚುನಾವಣೆ ದೃಷ್ಟಿಯಿಂದ ರಾಜಕೀಯ ಸಂಘರ್ಷದ ವೇದಿಕೆಯಾಗಿ ಈ ಬಜೆಟನ್ನು ಬಳಸಿಕೊಂಡಿರುವುದು ಕಾಣಿಸಿದೆ. ರಾಜ್ಯದ ಪ್ರಗತಿಗೆ ಪೂರಕ ಅಂಶಗಳು ಈ ಬಜೆಟ್‍ನಲ್ಲಿ ಇಲ್ಲವೇ ಇಲ್ಲ. ತಮ್ಮ ಚುನಾವಣಾ ಗೆಲುವಿಗೆ ಬೇಕಾದ ಗ್ಯಾರಂಟಿ ಮೂಲಕ ಏನೇನು ವಾಗ್ದಾನ ನೀಡಿದ್ದರೋ ಅದರ ಅನುಷ್ಠಾನಕ್ಕೆ ಕರ್ನಾಟಕದ ಗರಿಷ್ಠ ತೆರಿಗೆ ಹಣವನ್ನು ಮೀಸಲಿಡುವ ಥರ ಆಗಿದೆ ಎಂದು ವಿಶ್ಲೇಷಿಸಿದ್ದಾರೆ.

ಮುಂದಿನ ಕರ್ನಾಟಕ ನಿರ್ಮಾಣದ, ಅಭಿವೃದ್ಧಿಗೆ ಪೂರಕ ಅಂಶಗಳು ಈ ಬಜೆಟ್‍ನಲ್ಲಿ ಇಲ್ಲವೇ ಇಲ್ಲ. ಮುಂದಿನ ಕರ್ನಾಟಕ ನಿರ್ಮಾಣದ ದಾರಿಯೂ ಸುಗಮವಾಗಿ ಕಂಡುಬರುವುದಿಲ್ಲ. ಗೆಲುವಿಗೆ ಸೀಮಿತವಾಗಿರುವ ಗ್ಯಾರಂಟಿ ಆಗಿದೆಯೇ ಹೊರತು ಅದರಿಂದ ಮಾನವ ವಿಕಾಸ ಕಾಣುತ್ತಿಲ್ಲ. ಈಗಾಗಲೇ ಅವರು ಘೋಷಿಸಿದ ಅನೇಕ ಯೋಜನೆಗಳನ್ನು ಕೇಂದ್ರ ಸರಕಾರ ಮಾಡಿ ತೋರಿಸಿದೆ. ಕೆಲವು ಸಮುದಾಯಗಳು ತಮ್ಮ ವಾರಸುದಾರರು ಎಂಬ ರೀತಿಯಲ್ಲಿ ಬಜೆಟ್ ಒಳಗಡೆ ಎಲ್ಲ ಅಂಶಗಳನ್ನು ಸೇರಿಸಿದ್ದಾರೆ. ದೊಡ್ಡ ರೀತಿಯ ಸಾಲದ ಬಲೆಯ ಒಳಗೆ ರಾಜ್ಯ ಸಿಲುಕಲಿದೆ. ಮೊದಲ ವರ್ಷವೇ ದೊಡ್ಡ ಪ್ರಮಾಣದ ಸಾಲವನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕರ್ನಾಟಕವು ಹಿಂದೊಮ್ಮೆ ಕೋವಿಡ್ ನಿರ್ವಹಣೆ ಸೇರಿ ಅಭಿವೃದ್ಧಿಗಾಗಿ ಹೂಡಿಕೆಗೆ ಸಾಲ ತೆಗೆದುಕೊಂಡದಿದ್ದಿದೆ. ಆದರೆ, ಇಲ್ಲಿ ಚುನಾವಣಾ ಗ್ಯಾರಂಟಿ ಅನುಷ್ಠಾನಕ್ಕಾಗಿ ಸಾಲ ಮಾಡುವಂಥ ದಯನೀಯ ಸ್ಥಿತಿಗೆ ಸರಕಾರ ತೆಗೆದುಕೊಂಡು ಹೋಗಿದೆ. ಇದರಡಿ ಅಭಿವೃದ್ಧಿಯ ಯಾವುದೇ ಮುನ್ನೋಟಗಳು ಕಾಣುತ್ತಿಲ್ಲ. ಭವಿಷ್ಯದ ಭಾರತ ನಿರ್ಮಾಣದ ಯಾವ ಭೂಮಿಕೆಯೂ ಈ ಬಜೆಟ್‍ನಲ್ಲಿ ಕಾಣುತ್ತಿಲ್ಲ. ಒಂದಷ್ಟು ಸಮುದಾಯಗಳ ಓಲೈಕೆ, ಒಂದು ಸಮುದಾಯವನ್ನು ಓಲೈಸಲು ಕೇಂದ್ರ ಸರಕಾರವನ್ನು ದೂಷಿಸುವುದು, ತನ್ಮೂಲಕ ರಾಜಕೀಯ ಬಂಡವಾಳ ಮಾಡಿಕೊಂಡು ಮುಂದಿನ ಲೋಕಸಭಾ ಚುನಾವಣೆಯ ಲಾಭದತ್ತ ನೋಡುವುದು ಕಾಣಿಸುತ್ತಿದೆ ಎಂದು ವಿವರಿಸಿದ್ದಾರೆ.

ಈ ದೊಡ್ಡ ಪ್ರಮಾಣದ ಯೋಜನೇತರ ವೆಚ್ಚದ ಮೂಲಕ ಹಣದ ಸೋರಿಕೆ ಆಗಲಿದೆ. ಕರ್ನಾಟಕವನ್ನು ಎಟಿಎಂ ಮಾಡಲು ಬೇಕಾದ ಫಾರ್ಮುಲಾವನ್ನು ಈ ಗ್ಯಾರಂಟಿ ಮೂಲಕ ಮಾಡಿಕೊಂಡಿದ್ದಾರೆ. ಇಂಧನ ಕ್ಷೇತ್ರದಲ್ಲಿ ಸ್ವಾವಲಂಬಿ ಆಗಬೇಕಿದೆ, ದೂರದರ್ಶಿತ್ವದ ಯಾವುದೇ ಅಂಶಗಳು ಈ ಬಜೆಟ್‍ನಲ್ಲಿ ಕಾಣುತ್ತಿಲ್ಲ. ಕರ್ನಾಟಕದ ಬೆಳವಣಿಗೆಗೆ ಅತ್ಯಂತ ವಿಪುಲ ಅವಕಾಶಗಳಿದ್ದ ಸಂದರ್ಭದಲ್ಲಿ, ದೊಡ್ಡ ಪ್ರಮಾಣದ ಬಂಡವಾಳ ಕರ್ನಾಟಕದಲ್ಲಿ ಹೂಡುವಂಥ ಕಾಲಘಟ್ಟದಲ್ಲಿ, ಪ್ರಗತಿ ವಿಚಾರದಲ್ಲಿ ರಾಜ್ಯವು ಅತ್ಯಂತ ವೇಗವಾಗಿ ಮುನ್ನಡೆಯುತ್ತಿರುವ ಅವಧಿಯಲ್ಲಿ, ತಲಾದಾಯದಲ್ಲೂ (ಪರ್ ಕ್ಯಾಪಿಟ ಇನ್‍ಕಂ) ಮುಂದಿರುವ ಕಾಲಘಟ್ಟದಲ್ಲಿ ನಿರ್ವಹಣೆಯನ್ನು ನೋಡಿದಾಗ ಮುಂದೊಂದು ದಿನ, ಹಿಂದೆಲ್ಲ ಹಲವು ರಾಜ್ಯಗಳಿಗೆ ಬಿಮಾರು ಎಂಬ ಹಣೆಪಟ್ಟಿಯನ್ನು ಕಟ್ಟಿದ್ದರೋ ಆ ರಾಜ್ಯಗಳ ಸ್ಥಾನಕ್ಕೆ ನಮ್ಮ ರಾಜ್ಯ ಹೋಗುತ್ತದೇನೋ ಎಂಬ ಭಯ ಕಾಡುವಂತಾಗಿದೆ ಎಂದು ತಿಳಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!