ಹೊಸ ದಿಗಂತ ವರದಿ, ಅಂಕೋಲಾ:
ಸತತ ಮಳೆಯಿಂದ ಉಂಟಾಗಿರುವ ಸಮಸ್ಯೆಗಳನ್ನು ಬಗೆಹರಿಸಲು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಜನ ಸಾಮಾನ್ಯರಿಗೆ ತೊಂದರೆ ಆಗದಂತೆ ವ್ಯವಸ್ಥೆ ಮಾಡಬೇಕು ಎಂದು ಮಾಜಿ ಶಾಸಕಿ ರೂಪಾಲಿ ನಾಯ್ಕ ಅವರು ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ.
ಭಾರೀ ಮಳೆಯಿಂದ ಕಾರವಾರ ಅಂಕೋಲಾ ಕ್ಷೇತ್ರದ ಹಲವು ಪ್ರದೇಶಗಳಲ್ಲಿ ನೀರು ನಿಲ್ಲುವಂತಾಗಿದ್ದು ಜನರು ತೊಂದರೆ ಅನುಭವಿಸುವಂತಾಗಿದೆ ಅಗತ್ಯತೆ ಇದ್ದರೆ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು ಐ.ಆರ್.ಬಿ. ಚತುಷ್ಪತ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಬಹಳಷ್ಟು ಕಡೆಗಳಲ್ಲಿ ನೀರು ಹರಿದು ಹೋಗಲು ತಡೆಯಾಗಿದೆ, ನೌಕಾನೆಲೆ ವ್ಯಾಪ್ತಿಯಲ್ಲಿ ಸಹ ನೀರು ಹರಿದು ಹೋಗದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ನಿಲ್ಲುವಂತಾಗಿದೆ ಐ.ಆರ್.ಬಿ ಮತ್ತು ನೌಕಾನೆಲೆ ಅಧಿಕಾರಿಗಳ ಸಭೆ ಕರೆದು ಅವ್ಯವಸ್ಥೆ ಸರಿಪಡಿಸಲು ಸೂಚನೆ ನೀಡುವಂತೆ ರೂಪಾಲಿ ನಾಯ್ಕ ತಿಳಿಸಿದ್ದಾರೆ.
ಕದ್ರಾ ಜಲಾಶಯದಿಂದ ನೀರು ಹೊರ ಬಿಡುವ ಪರಿಸ್ಥಿತಿ ಎದುರಾದರೆ ಯಾವುದೇ ರೀತಿಯ ಪ್ರವಾಹ ಪರಿಸ್ಥಿತಿಗೆ ಅವಕಾಶ ಮಾಡಿಕೊಡದಂತೆ ಹಂತ ಹಂತವಾಗಿ ನೀರು ಬಿಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿರುವುದಾಗಿ ಮಾಜಿ ಶಾಸಕಿ ರೂಪಾಲಿ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.