ಹೊಸ ದಿಗಂತ ವರದಿ, ಬಳ್ಳಾರಿ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿದ ಬಜೆಟ್ ನಲ್ಲಿ ಬಳ್ಳಾರಿ ಜಿಲ್ಲೆಯ ಕೈಗಾರಿಕೆ, ವ್ಯಾಪಾರ- ವಾಣಿಜ್ಯ ಅಭಿವೃದ್ಧಿ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಯಾವುದೇ ವಿಷಯಗಳು ಬಜೆಟ್ ನಲ್ಲಿ ಇಲ್ಲವಾಗಿವೆ ಎಂದು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಗೌರವ ಕಾರ್ಯದರ್ಶಿ ಯಶವಂತರಾಜ್ ನಾಗಿರೆಡ್ಡಿ ಅವರು ತಿಳಿಸಿದ್ದಾರೆ.
ಈ ಹಿಂದೆ ರಾಹುಲ್ ಗಾಂಧಿ ಅವರು ಚುನಾವಣೆಯಲ್ಲಿ ನೀಡಿದ್ದ 5 ಸಾವಿರ. ಕೋಟಿ ರೂ. ವೆಚ್ಚದ ಜೀನ್ಸ್ ಅಪಾರಲ್ ಪಾರ್ಕ್ ಕುರಿತು ಪ್ರಸ್ತಾಪಿಸಿಲ್ಲ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಪ್ರಯತ್ನದಲ್ಲಿ ಬಳ್ಳಾರಿಯಲ್ಲಿ ಪ್ರಾರಂಭಿಸಲು ಉದ್ದೇಶಿರುವ ಒಣ ಮೆಣಸಿನಕಾಯಿ ಮಾರುಕಟ್ಟೆ ಸ್ಥಾಪನೆ, ಸಿರಿವಾರದಲ್ಲಿ ನಿರ್ಮಿಸಲು ಉದ್ದೇಶಿರುವ ವಿಮಾನ ನಿಲ್ದಾಣ ವಿಚಾರಗಳು ಬಜೆಟ್ ನಲ್ಲಿ ಕಾಣುತ್ತಿಲ್ಲ. ತುಂಗಭದ್ರಾ ಜಲಾಶಯಕ್ಕೆ ‘ನವಲಿ’ಬಳಿ ನಿರ್ಮಿಸಲು ಉದ್ದೇಶಿರುವ ಸಮಾನಾಂತರ ಜಲಾಶಯ ಕುರಿತು ಪ್ರತೀ ಬಜೆಟ್ ನಲ್ಲಿ ಪ್ರಸ್ತಾಪವಾಗುತ್ತಿದೆ. ಆದರೇ, ಕ್ರಿಯೆಯಲ್ಲಿ ಇಲ್ಲವಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಕಲ್ಯಾಣ ಕರ್ನಾಟಕ, ಆಂಧ್ರ – ತೆಲಂಗಾಣ ಜನರ ಸಂಜೀವಿನಿಯಾಗಿರುವ ಬಳ್ಳಾರಿಯ ಟ್ರಾಮಾಕೇರ್ ಸೆಂಟರ್, ವಿಮ್ಸ್ ಆಸ್ಪತ್ರೆಯ ಪುನಃಶ್ಚೇತನಕ್ಕೆ, ಜಿಲ್ಲಾ ಆಸ್ಪತ್ರೆಯ ಸಧೃಢತೆಗೆ ಆದ್ಯತೆ ನೀಡಿಲ್ಲ, ಕರ್ನಾಟಕದ ಗಡಿ ಜಿಲ್ಲೆಗಳಾದ ಬಳ್ಳಾರಿ, ಕೋಲಾರ, ಕಲಬುರ್ಗಿ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಹೊಸ ಕೈಗಾರಿಕೆಗಳ ಪ್ರಾರಂಭಕ್ಕೆ ಹಾಗೂ ಇರುವ ಕೈಗಾರಿಕೆಗಳ ತಂತ್ರಜ್ಞಾನದ ಆಧುನೀಕರಣಕ್ಕೆ ಮುಖ್ಯ ಮಂತ್ರಿಗಳು ಗಮನಹರಿಸಿಲ್ಲ. ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ಗಮನ ಹರಿಸಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.