ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರೀಯ ವಿಚಾರಗಳ ಪ್ರಸರಣದೊಂದಿಗೆ ನಾಡಿನಾದ್ಯಂತ ಓದುಗರಲ್ಲಿ ಸಾಮಾಜಿಕ ಹಾಗೂ ವೈಚಾರಿಕ ಜಾಗೃತಿ ಮೂಡಿಸುತ್ತಿರುವ ಕನ್ನಡ ವಾರ ಪತ್ರಿಕೆ ‘ವಿಕ್ರಮ’ ಈ ವರ್ಷ ಅಮೃತ ಸಂಭ್ರಮ ಆಚರಿಸಿಕೊಳ್ಳುತ್ತಿದೆ.
1948ರ ಜುಲೈ 22ರ ಗುರುಪೂರ್ಣಿಮೆಯಂದು ಪ್ರಾರಂಭಗೊಂಡ ವಿಕ್ರಮ ವಾರ ಪತ್ರಿಕೆ ಕಳೆದ 75 ವರ್ಷಗಳ ನಿರಂತರ ಅಕ್ಷರ ಸೇವೆಯಲ್ಲಿ ತಲ್ಲೀನವಾಗಿದ್ದು, ತನ್ನದೇ ಆದ ವಿಶಿಷ್ಟ ಓದುಗ ಬಳಗ ಹೊಂದಿದೆ. ರಾಷ್ಟ್ರೀಯ ವಿಚಾರದ ಲೇಖನಗಳು, ವಿವಿಧ ಅಂಕಣಗಳು, ವಿಶ್ಲೇಷಣೆಗಳು, ವಿಶೇಷ ಸಂಚಿಕೆಗಳು ಸೇರಿದಂತೆ ಬಹುಮುಖದ ವೈಚಾರಿಕ ಮಾಹಿತಿಗಳನ್ನು ಓದುಗರಿಗೆ ತಲುಪಿಸುತ್ತಿದೆ.
‘ಸ್ವಯಮೇವ ಮೃಗೇಂದ್ರತಾ’ ಎನ್ನುವ ಲಾಂಛನ ವಾಕ್ಯ ಹೊತ್ತಿರುವ ವಿಕ್ರಮ ವಾರ ಪತ್ರಿಕೆಯು ‘ಉಜ್ವಲ ರಾಷ್ಟ್ರೀಯ ಕನ್ನಡ ವಾರಪತ್ರಿಕೆ’ ಎಂಬ ಅಡಿ ಶೀರ್ಷಿಕೆ ಹೊಂದಿದೆ. ವಿಕ್ರಮ ಪ್ರಕಾಶನದಿಂದ ದೀರ್ಘಕಾಲ ಪ್ರಕಟಗೊಳ್ಳುತ್ತಿದ್ದ ವಿಕ್ರಮ ಇದೀಗ ಜ್ಞಾನಭಾರತಿ ಪ್ರಕಾಶನದ ವತಿಯಿಂದ ಮುದ್ರಿತವಾಗುತ್ತಿದೆ.
ವಿಕ್ರಮ ಪತ್ರಿಕೆ ಕಾಲೇಜು ವಿದ್ಯಾರ್ಥಿಗಳಿಗೆ ಪತ್ರಲೇಖನ ಕಾರ್ಯಾಗಾರ, ಯುವ ಬರಹಗಾರರಿಗೆ ಮಾಧ್ಯಮ ಕಾರ್ಯಾಗಾರ, ಹಿರಿಯ ಸಾಧಕರು ಹಾಗೂ ಗಣ್ಯವ್ಯಕ್ತಿಗಳೊಂದಿಗೆ ಸಂವಾದ ಕಾರ್ಯಕ್ರಮ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಓದುಗರ ಸಮಾವೇಶ ಕಾರ್ಯಕ್ರಮಗಳು ಸೇರಿದಂತೆ ಅನೇಕ ಚಟುವಟಿಕೆಗಳ ಮೂಲಕ ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯವಾಗಿ ಕಾರ್ಯಕ್ರಮ ಆಯೋಜಿಸುತ್ತಿದೆ.
ಕಾಫಿಟೇಬಲ್ ಬುಕ್ ಎಂಬ ಜ್ಞಾನ ಕಣಜ
ವಿಜಯನಗರ ಸಾಮ್ರಾಜ್ಯ, ಸಾಂಸ್ಕೃತಿಕ ನಗರಿ ಮೈಸೂರು, ಮಲೆನಾಡಿನ ರಾಜಪರಂಪರೆ, ಡಾ. ಬಿ.ಆರ್. ಅಂಬೇಡ್ಕರ್ ವಿಚಾರಗಳು ಸೇರಿದಂತೆ ನಿಯಮಿತ ಕಾಲಾವಧಿಯಲ್ಲಿ ನಾಡಿನ ವೈಶಿಷ್ಟ್ಯತೆಗಳು ಕುರಿತು ವಿಕ್ರಮ ಹೊರತರುತ್ತಿರುವ ಕಾಫಿ ಟೇಬಲ್ ಬುಕ್ ಓದುಗರ ಮೆಚ್ಚುಗೆಗೆ ಭಾಜನವಾಗಿದೆ.
ಅದರಂತೆ, ಅನೇಕ ವೈಶಿಷ್ಟ್ಯತೆಗಳಿಂದ ಕೂಡಿದ ಕಿತ್ತೂರು ಕರ್ನಾಟಕ ಪ್ರದೇಶದ ಕುರಿತು “ಸಂಪನ್ನ ಸಂಸ್ಕೃತಿಯ ಸುಂದರ ಸೀಮೆ ಕಿತ್ತೂರು ಕರ್ನಾಟಕ” ಎಂಬ ಶೀರ್ಷಿಕೆಯಡಿ ವಿಶೇಷ ಪುಸ್ತಕವನ್ನು ನಾಡಿನ ಜನತೆಗೆ ಅರ್ಪಿಸುತ್ತಿದೆ.
ಜುಲೈ 8ರಂದು ಸಂಜೆ 6:30 ಗಂಟೆಗೆ ಹುಬ್ಬಳ್ಳಿಯ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಈ ಕಾಫಿ ಟೇಬಲ್ ಪುಸ್ತಕ ಲೋಕಾರ್ಪಣೆಗೊಳಿಸುವರು. ಭಾರತೀಯ ಶಿಕ್ಷಣ ಮಂಡಲದ ಅಖಿಲ ಭಾರತೀಯ ಸಂಘಟನ ಮಂತ್ರಿ ಶಂಕರಾನಂದ ಮುಖ್ಯ ವಕ್ತಾರರಾಗಿ ಭಾಗವಹಿಸುವರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಸಹ ಸಂಘಚಾಲಕ ಅರವಿಂದರಾವ್ ದೇಶಪಾಂಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಹಾಗೂ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಆತಿಥ್ಯ ವಹಿಸುವರು.
ಮಾಜಿ ಸಚಿವ, ನರಗುಂದದ ಶಾಸಕ ಸಿ.ಸಿ. ಪಾಟೀಲ್, ಮಾಜಿ ಸಚಿವೆ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ, ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ, ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ, ಜಮಖಂಡಿ ಶಾಸಕ ಜಗದೀಶ ಗುಡಗುಂಟಿ, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ, ಕುಂದಗೋಳದ ಶಾಸಕ ಎಮ್.ಆರ್. ಪಾಟೀಲ, ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ, ಹುಕ್ಕೇರಿ ಶಾಸಕ ನಿಖಿಲ ಕತ್ತಿ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.