ಹೊಸ ದಿಗಂತ ವರದಿ, ಮಡಿಕೇರಿ:
ಕಾರಿನಲ್ಲಿ ತೆರಳುತ್ತಿದ್ದ ನಗರಸಭಾ (ಬಿಜೆಪಿ) ಸದಸ್ಯರನ್ನು ತಡೆದು ಹಲ್ಲೆ ನಡೆಸಿರುವ ಘಟನೆ ಶುಕ್ರವಾರ ನಗರದಲ್ಲಿ ನಡೆದಿದೆ.
ಗಂಭೀರವಾಗಿ ಗಾಯಗೊಂಡಿರುವ ನಗರಸಭಾ ಸದಸ್ಯ ಅಪ್ಪಣ್ಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ನಗರಸಭೆಯ ಸದಸ್ಯ ಅಪ್ಪಣ್ಣ ಅವರು ಶುಕ್ರವಾರ ನಗರದ ಮೈತ್ರಿ ಪೊಲೀಸ್ ಸಭಾಂಗಣ ಬಳಿ ತೆರಳುತ್ತಿದ್ದ ಸಂದರ್ಭ ಅವರ ಕಾರನ್ನು ತಡೆದ ಯುವಕರ ಗುಂಪೊಂದು ಅವರ ಮೇಲೆ ಹಲ್ಲೆ ನಡೆಸಿದ್ದು, ತಡೆಯಲು ಬಂದ ಮಹಿಳೆ ಸೇರಿದಂತೆ ಸ್ಥಳದಲ್ಲಿದ್ದವರಿಗೂ ಧಮ್ಕಿ ಹಾಕಿರುವುದಾಗಿ ಹೇಳಲಾಗಿದೆ.
ಗುರುವಾರ ಸುರಿದ ಭಾರೀ ಮಳೆಗೆ ಐಟಿಐ ಜಂಕ್ಷನ್ ಸಮೀಪದ ಹೊಟೇಲ್ ಒಂದಕ್ಕೆ ನೀರು ನುಗ್ಗಿ ಸುದ್ದಿಯಾಗಿತ್ತು. ಸುದ್ದಿ ತಿಳಿದ ವಾರ್ಡ್ ಸದಸ್ಯ ಅಪ್ಪಣ್ಣ ಅವರು ಇಂಜಿನಿಯರ್ ಮೂಲಕ ಸಮಸ್ಯೆ ಬಗೆಹರಿಸುವಲ್ಲಿ ಪ್ರಯತ್ನಿಸಿದ್ದರು. ಆದರೆ ಶುಕ್ರವಾರ ಮಧ್ಯಾಹ್ನ ಅಪ್ಪಣ್ಣ ಅವರಜ ಊಟಕ್ಕೆ ತೆರಳುತ್ತಿರುವ ಸಂದರ್ಭ ಏಕಾಏಕಿ ಅಡ್ಡಗಟ್ಟಿದ, ಹೋಟೆಲ್ ಮಾಲಕನ ಸಂಗಡಿಗರು ಅಪ್ಪಣ್ಣ ಅವರ ಮೇಲೆ ವಿನಾಕಾರಣ ಹಲ್ಲೆ ನಡೆಸಿದ್ದಾರೆ.
ಈ ಹೋಟೆಲ್ ಕಟ್ಟಡ ಅನಧಿಕೃತವೆನ್ನಲಾಗಿದ್ದು, ಆದರೂ, ನೀರು ನುಗ್ಗಿದಾಗ ಮಾನವೀಯ ನೆಲೆಯಲ್ಲಿ ಪ್ರಥಮ ಹಂತದ ದುರಸ್ತಿ ಕಾರ್ಯ ಮಾಡಿಸಲಾಗಿತ್ತು. ಆದರೂ ರಾಜಕೀಯ ದ್ವೇಷದಿಂದ ಈ ಹಲ್ಲೆ ನಡೆಸಲಾಗಿದೆ ಎಂದು ಅಪ್ಪಣ್ಣ ಅವರು ತಿಳಿಸಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿಕಾರಿಯವರನ್ನು ಭೇಟಿ ಮಾಡಿ ದೂರು ನೀಡಿರುವ ನಗರಸಭಾ ಸದಸ್ಯರು, ಬಳಿಕ ಜಿಲ್ಲಾ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆರೋಪಿಗಳ ವಿರುದ್ಧ ಕಾನೂನು ಕ್ರಮದ ಭರವಸೆ ನೀಡಿದ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು, ಈಗಾಗಲೇ ಆರೋಪಿ ಮೋನಿಶ್ ಎಂಬವರನ್ನು ಬಂಧನ ಮಾಡಿಸಿದ್ದಾರೆ. ಅಲ್ಲದೆ ಇತರ ಆರೋಪಿಗಳ ವಿರುದ್ಧವೂ ಕ್ರಮಕ್ಕೆ ಮುಂದಾಗಿದ್ದಾರೆ.
ಮಡಿಕೇರಿಯಲ್ಲಿ ಮಾದಕ ವಸ್ತುಗಳ ವ್ಯಸನಿಗಳು ಹೆಚ್ಚಾಗಿದ್ದು, ಹಲವು ಪಡ್ಡೆ ಹುಡುಗರ ತಂಡದ ಮೂಲಕ ಕೆಲವರು ಇಂತಹ ನೀಚ ಕೃತ್ಯಗಳನ್ನು ಮಾಡಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಪೊಲೀಸ್ ಇಲಾಖೆ ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಿ ಇಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.