ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲಂಗಾಣದ ಐತಿಹಾಸಿಕ ನಗರಿ ವರಂಗಲ್‌ಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಭೇಟಿ ನೀಡಿ, ಇಲ್ಲಿನ ಪ್ರಸಿದ್ಧ ಭದ್ರಕಾಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಬಳಿಕ 6,100 ಕೋಟಿ ರೂಪಾಯಿಗಳ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಪ್ರಧಾನಮಂತ್ರಿಯವರು ಜನರನ್ನುದ್ದೇಶಿಸಿ ಮಾತನಾಡಿ, ತೆಲಂಗಾಣ ಜನತೆ ಹೊಸ ಗುರಿಗಳಿಗೆ ಹೊಸ ಹಾದಿಯನ್ನು ಸುಗಮಗೊಳಿಸುವಂತೆ ಕರೆ ನೀಡಿದರು. ತೆಲಂಗಾಣ ಜನರ ಶಕ್ತಿ ಯಾವಾಗಲೂ ಭಾರತದ ಶಕ್ತಿಯನ್ನು ಹೆಚ್ಚಿಸುತ್ತದೆ. ಇಂದು ಭಾರತವನ್ನು ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡುವಲ್ಲಿ ತೆಲಂಗಾಣ ಜನರ ಪಾತ್ರ ಬಹಳ ಮುಖ್ಯವಾಗಿದೆ ಎಂದರು.
ತೆಲಂಗಾಣದಲ್ಲಿ ಅವಕಾಶಗಳ ಕೊರತೆ ಇಲ್ಲ. ಹೊಸ ಗುರಿಗಳಿಗೂ ಹೊಸ ದಾರಿಗಳನ್ನು ಹಾಕಬೇಕು. ನಾಗ್ಪುರ-ವಿಜಯವಾಡ ಕಾರಿಡಾರ್‌ಗೂ ಇಂದು ಶಂಕುಸ್ಥಾಪನೆ ನಡೆದಿದ್ದು, ಇದರೊಂದಿಗೆ ತೆಲಂಗಾಣ ಆಧುನಿಕ ಸಂಪರ್ಕವನ್ನು ಪಡೆಯಲಿದೆ. ಅಭಿವೃದ್ಧಿಯ ಮಂತ್ರವನ್ನು ಅನುಸರಿಸುವಂತೆ ಕಿವಿಮಾತನ್ನು ಹೇಳಿದರು. ತೆಲಂಗಾಣ ರಾಜ್ಯವಾಗಿ ಈ ವರ್ಷದೊಂದಿಗೆ ಒಂಬತ್ತು ವರ್ಷಗಳನ್ನು ಪೂರೈಸಿದೆ. ಹೊಸ ರಾಜ್ಯವಾಗಿದ್ದರೂ, ಭಾರತದ ಇತಿಹಾಸದಲ್ಲಿ ಅದರ ಜನರ ಕೊಡುಗೆ ಅಪಾರವಾಗಿದೆ.
ಇಂತಹ ಪರಿಸ್ಥಿತಿಯಲ್ಲಿ ಇಡೀ ವಿಶ್ವವೇ ಭಾರತದಲ್ಲಿ ಹೂಡಿಕೆ ಮಾಡಲು ಬರುತ್ತಿದೆ ಎಂದ ಪ್ರಧಾನಿ ಮೋದಿ… ತೆಲಂಗಾಣದ ಮುಂದೆ ಹಲವು ಅವಕಾಶಗಳಿವೆ. ಇಂದಿನ ಭಾರತವನ್ನು ನವ ಭಾರತ ಎಂದು ಬಣ್ಣಿಸಲಾಗಿದೆ. ಯುವ ಶಕ್ತಿ ಸಾಕಷ್ಟಿದೆ ಎಂದರು. 21ನೇ ಶತಮಾನದ ಈ ಮೂರನೇ ದಶಕದಲ್ಲಿ ನಮಗೆ ಸುವರ್ಣ ಯುಗವಿದೆ. ಕ್ಷಿಪ್ರ ಅಭಿವೃದ್ಧಿಯ ಅವಕಾಶದಲ್ಲಿ ದೇಶದ ಯಾವುದೇ ಭಾಗವು ಹಿಂದೆ ಬೀಳಬಾರದು ಎಂದರು.