ಸಹಕಾರ ಸಂಸ್ಥೆಗಳಲ್ಲಿ ಹಣ ದುರುಪಯೋಗವಾದರೆ ಕಠಿಣ ಕ್ರಮದ ಎಚ್ಚರಿಕೆ-ಕೆ.ಎನ್.ರಾಜಣ್ಣ

ಹೊಸದಿಗಂತ ವರದಿ ಮೈಸೂರು:‌ 

ಸಹಕಾರ ಸಂಸ್ಥೆಗಳು ಹಾಗೂ ಸಹಕಾರ ಬ್ಯಾಂಕ್‌ಗಳಲ್ಲಿ ಯಾವುದೇ ರೀತಿಯ ಹಣ ದುರುಪಯೋಗ ಮಾಡಿಕೊಂಡಿರುವುದು ಕಂಡುಬಂದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಎಚ್ಚರಿಕೆ ನೀಡಿದರು.

ಶನಿವಾರ ಮೈಸೂರು ಪ್ರಾಂತ್ಯದ ಇಲಾಖಾಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬ್ಯಾಂಕ್ ಸಿಬ್ಬಂದಿ ಪರಿಶೀಲನೆ ಮಾಡಿ ಸಾಲ ವಿತರಣೆ ಮಾಡಬೇಕು. ಎಲ್ಲಾ ಸಿಬ್ಬಂದಿಗೆ ಬಯೋಮೆಟ್ರಿಕ್ ಹಾಜರಾತಿ ಇರಬೇಕು. ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಸ್ ವರ್ಡ್ಗಳು ದುರುಪಯೋಗ ಆಗಬಾರದು. ಯಾವುದೇ ಅಧಿಕಾರಿಗಳ ಮೇಲೆ ಹಣ ದುರುಪಯೋಗದ ದೂರುಗಳು ಬಂದರೆ, ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ಹಿಂದಿನ ಹಣ ದುರುಪಯೋಗದ ಪ್ರಕರಣಗಳು ಇದ್ದರೆ, ಆ ಪ್ರಕರಣಗಳನ್ನು ಬೇಗ ಇತ್ಯರ್ಥ ಪಡಿಸಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಹಕಾರ ಇಲಾಖೆಯಲ್ಲಿ ಹಣ ದುರುಪಯೋಗದ ಕುರಿತು ದಾಖಲಾಗಿರುವ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣ ಗಳ ಕುರಿತು ಮಾಹಿತಿ ಪಡೆದುಕೊಂಡ ಸಚಿವರು ತುಂಬಾ ಪ್ರಕರಣಗಳು ಇನ್ನೂ ಇತ್ಯರ್ಥ ಆಗದೆ ಹಾಗೆ ಉಳಿದಿದ್ದು, ಕೆಲವು ಅಧಿಕಾರಿಗಳು ಕೋರ್ಟ್ ಪ್ರಕರಣಗಳಿಗೆ ಸರಿಯಾಗಿ ಹಾಜರು ಆಗುವುದಿಲ್ಲ, ಈ ರೀತಿ ಆಗಬಾರದು ಸಂಬಂಧಿಸಿದ ಅಧಿಕಾರಿಗಳು ಕೋರ್ಟ್ ಪ್ರಕರಣಗಳಿಗೆ ಸೂಕ್ತ ದಾಖಲೆಗಳೊಂದಿಗೆ ಹಾಜರಾಗಿ ತಪ್ಪಿತಸ್ಥರಿಗೆ ಶಿಕ್ಷೆ ಯಾಗುವಂತೆ ನೋಡಿಕೊಳ್ಳಿ ಎಂದರು.

ಸಾಲ ವಸೂಲಾತಿ ಮಾಡುವಲ್ಲಿ ಅಧಿಕಾರಿಗಳು ಕಾನೂನು ರೀತಿ ಕ್ರಮ ವಹಿಸಬೇಕು. ಅಧಿಕಾರಿಗಳು ಕೇವಲ ಕಚೇರಿಯಲ್ಲಿ ಮಾತ್ರ ಇರದೆ ಫೀಲ್ಡ್ ನಲ್ಲಿಯೂ ಹೋಗಿ ಕಾರ್ಯ ನಿರ್ವಹಿಸಬೇಕು. ಕಾಟ್ಲಾ ಮೀನಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದ್ದು, ಹೆಚ್ಚಿನ ಮೀನು ಮರಿಗಳನ್ನು ಬಿಟ್ಟು ಉತ್ಪಾದನೆ ಮಾಡುವಂತೆ, ಸಹಕಾರ ಮೀನು ಉತ್ಪಾದಕ ಸಂಘಗಳಿಗೆ ತಿಳಿಸಿದರು. ಹಾಲು ಉತ್ಪಾದನೆಯನ್ನು ಹೆಚ್ಚಳ ಮಾಡಬೇಕು. ಪಶು ಆಹಾರಗಳ ಬೆಲೆಗಳು ಹೆಚ್ಚಳವಾಗಿದೆ ಹಾಗೂ ಪಶುಗಳಿಗೆ ಗಂಟು ರೋಗಗಳು ಬಂದು ಹಾಲು ಉತ್ಪಾದನೆ ಕುಂಠಿತವಾಗಿತ್ತು. ಹಾಲು ಉತ್ಪಾದಕ ರೈತರ ಖಾತೆಗಳಿಗೆ ಸಕಾಲದಲ್ಲಿ ಸಬ್ಸಿಡಿ ಹಣ ತಲುಪಬೇಕು. ಪಶುಗಳಿಗೆ ವಿಮೆ ಮಾಡಿಸಬೇಕು. ನಂದಿನಿ ತುಪ್ಪಕ್ಕೆ ಹೆಚ್ಚಿನ ಬೇಡಿಕೆ ಇದೆ. ತಿರುಪತಿ ದೇವಸ್ಥಾನದ ಲಾಡು ತಯಾರಿಸಲು ನಂದಿನಿ ತುಪ್ಪಕ್ಕೆ ಬೇಡಿಕೆ ಇದ್ದು, ಹೆಚ್ಚಿನ ತುಪ್ಪವನ್ನು ಉತ್ಪಾದನೆ ಮಾಡುವಂತೆ ಹಾಲು ಒಕ್ಕೂಟ ಗಳಿಗೆ ಸಲಹೆ ನೀಡಿದರು.

ಸಹಕಾರ ಸಂಸ್ಥೆಗಳ ವತಿಯಿಂದ ಪ್ರತಿ ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ಹಾಸ್ಟೆಲ್ ಗಳ ತೆರೆಯುವಂತೆ ಸೂಚಿಸಿದರು. ಡಿಸೆಂಬರ್ ಒಳಗೆ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ತೆರೆಯಬೇಕು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!