ಹೊಸದಿಗಂತ ವರದಿ ಹುಬ್ಬಳ್ಳಿ:
ಬೆಳಗಾವಿ ಜಿಲ್ಲೆಯ ಹಿರೇಕೋಡಿಯ ನಂದಿ ಪರ್ವತ ಆಶ್ರಮ ಜೈನ ಮುನಿ ಕಾಮಕುಮಾರ ನಂದಿ ಮಹರಾಜ ಕೊಲೆ ಖಂಡನೀಯವಾಗಿದ್ದು, ಪೊಲೀಸರು ತಕ್ಷಣ ತನಿಖೆ ನಡೆಸಿ ಆರೋಪಿಗಳಿಗೆ ಶಿಕ್ಷೆ ನೀಡವಂತಾಗಬೇಕು ಎಂದು ವರೂರ ಆಚಾರ್ಯ ಗುಣದರ ಶ್ರೀ ಹಾಕುತ್ತ ಸರ್ಕಾರಕ್ಕೆ ಆಗ್ರಹಿಸಿದರು.
ಶನಿವಾರ ವರೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರಾಗಿ ಮಾತನಾಡಿದ ಅವರು, ಇಂತಹ ದೊಡ್ಡ ಪ್ರಕರಣವಾದರೂ ಸರ್ಕಾರವಾಗಲಿ ಹಾಗೂ ಮುಖ್ಯಮಂತ್ರಿಯಾಗಲಿ ಪ್ರತಿಕ್ರಿಯೆ ನೀಡದಿರುವುದು ದುರದೃಷ್ಟಕರ ಸಂಗತಿ. ಅಲ್ಪಸಂಖ್ಯಾತ ಸಮಾಜವಾಗಿದ್ದರಿಂದ ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದರು.
ಸತ್ಯ, ಅಹಿಂಸೆ ತತ್ವ ಬೋಧಿಸುವ ಜೈನ ಮುನಿಗಳ ಕೊಲೆ ಇಡೀ ಸಮಾಜದ ದುಃಖಕ್ಕೆ ಕಾರಣವಾಗಿದೆ. ಸಮಾಜದಲ್ಲಿ ಜೈನ ಮುನಿಗಳಿಗೆ ರಕ್ಷಣೆ ಇಲ್ಲವಾದಾಗ ಇನ್ನೂ ಸಾಮಾನ್ಯ ಜನರ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದರು.
ಸ್ವಾತಂತ್ರ್ಯ ದೊರೆತ ಬಳಿಕ ಇಂತಹ ಘೋರವಾದ ಕೃತ್ಯ ನಾವು ನೋಡಿರಲಿಲ್ಲ. ಅಹಿಂಸೆ ಪ್ರತಿಪಾದಿಸುವರಿಗೆ ಈ ರೀತಿ ಆಗುತ್ತೆ ಎಂಬುದು ಊಹಿಸಿರಲಿಲ್ಲ. ಸರ್ಕಾರ ನಮ್ಮಗೆ ಸುರಕ್ಷತೆ ನೀಡುವರೆಗೂ ಆಮರಣ ಉಪವಾಸ ಮಾಡುತ್ತೇವೆ ಎಂದು ಹೇಳಿದರು.
ಇಂದಿನಿಂದ ಜೈನ ಮುನಿಗಳಿಗೆ ಪೊಲೀಸ್ ಭದ್ರತೆ ಒದಗಿಸಲು ಆಗ್ರಹಿಸಿದರು. ಸುರಕ್ಷತೆ ಇಲ್ಲದ ನಾವು ಬದುಕುವುದಾದರೂ ಹೇಗೆ? ಆದರಿಂದ ಸರ್ಕಾರ ನಮಗೆ ಅಧಿಕೃತವಾಗಿ ಸುರಕ್ಷತೆ ನೀಡುವ ಎಂದು ಒತ್ತಾಯಿಸಿದರು.
ಸಮಾಜದಲ್ಲಿ ಎಲ್ಲರ ಏಳಿಗೆಯಾಗಲಿ ಎಂದು ಭಯಸಿದ ಅವರು ಟ್ರಸ್ಟ್ ಮೂಲಕ ಬಡಜನರಿಗೆ ಸಹಾಯ ಮಾಡಿದ್ದರು. ಹಣ ಪಡೆದವರ ಹತ್ತಿರ ಹಣ ತರಲು ಹೋದವರು ಅವರಿಂದ ಹೆಣವಾಗಿದ್ದಾರೆ ಎಂದು ಆರೋಪಿಸಿದರು.