ಹೊಸದಿಗಂತ ವರದಿ ಮಂಡ್ಯ :
ರೈತರ ಜೀವನಾಡಿಯಾಗಿರುವ ಕೃಷ್ಣರಾಜಸಾಗರ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಳವಾಗಿದ್ದು, ಒಂದೇ ದಿನದಲ್ಲಿ ಎರಡು ಅಡಿ ನೀರು ಹರಿದು ಬಂದಿದೆ.
ಕಾವೇರಿ ಉಗಮ ಸ್ಥಳ ಭಾಗಮಂಡಲ ಹಾಗೂ ಸುತ್ತಮುತ್ತಲ ಪ್ರದೇಶ, ಕೊಡಗು ಜಿಲ್ಲಾದ್ಯಂತ ಕಳೆದ ಮೂರ್ನಾಲ್ಕು ದಿನಗಳಿಂದ ವ್ಯಾಪಕ ಮಳೆ ಸುರಿಯುತ್ತಿರುವ ಕಾರಣ ಕೆ.ಆರ್.ಎಸ್. ಅಣೆಕಟ್ಟೆಗೆ ಒಳ ಹರಿವಿ ಪ್ರಮಾಣ ಹೆಚ್ಚಳವಾಗಿದೆ.
ಎರಡು ಅಡಿ ನೀರು ಹೆಚ್ಚಳ: 124.80 ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯಕ್ಕೆ 13449 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಜಲಾಶಯದಲ್ಲಿ ಶನಿವಾರ ಬೆಳಿಗ್ಗೆ 82.00 ಅಡಿ ನೀರು ಸಂಗ್ರವಾಗಿದೆ. ಶುಕ್ರವಾರ ಬೆಳಿಗ್ಗೆ ಜಲಾಶಯದಲ್ಲಿ 79.50 ಅಡಿ ನೀರಿತ್ತು, ಸಂಜೆ ವೇಳೆಗೆ 80.40 ತಲುಪಿತ್ತು, ಇದೀಗ ಎರಡು ಅಡಿ ನೀರು ಹೆಚ್ಚಳವಾಗಿದೆ.
ಕಳೆದ ವರ್ಷ ಇಷ್ಟೊತ್ತಿಗೆ ಜಲಾಶಯಕ್ಕೆ ಅಧಿಕ ಪ್ರಮಾಣದ ನೀರು ಹರಿದು ಬಂದು ತುಂಬುವ ಹಂತದಲಿತ್ತು. ಕಳೆದ ವರ್ಷದ ಇದೇ ದಿನ 119.44 ಅಡಿ ನೀರು ಸಂಗ್ರವಾಗಿತ್ತು.
ಈ ವರ್ಷ ಮುಂಗಾರು ದುರ್ಬಲ: ಜೂನ್‌ನಲ್ಲಿ ಮುಂಗಾರು ರಾಜ್ಯ ಪ್ರವೇಶಿಸಿ ಕಾವೇರಿಯ ಉಗಮ ಕೊಡಗು ಜಿಲ್ಲೆಯಲ್ಲಿ ಸತತ ಮಳೆಯಾಗುತ್ತಿತ್ತು, ಇದರಿಂದ ಕೆಆರ್‌ಎಸ್‌ಗೆ ನೀರು ಹರಿದು ಬರುತ್ತಿತ್ತು, ಆದರೆ ಈ ವರ್ಷ ಮುಂಗಾರು ದುರ್ಬಲತೆಯಿಂದ ಮಳೆ ಕೊರತೆ ಹಿನ್ನೆಲೆಯಲ್ಲಿ ಜಲಾಶಯದಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಕುಸಿದಿತ್ತು. ಡೆಡ್ ಸ್ಟೋರೇಜ್ ಮಟ್ಟ ತಲುಪಿತ್ತು, ಇದೀಗ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಒಂದೇ ದಿನದಲ್ಲಿ ಎರಡು ಅಡಿ ನೀರು ಹರಿದು ಬಂದಿರುವುದು ರೈತರಲ್ಲಿ ಮಂದಹಾಸ ಮೂಡಿಸಿದೆ.
ತುಸು ಸಮಾಧಾನ: ಈ ಬಾರಿ ಮುಂಗಾರು ಭಿತ್ತನೆಗೆ ಮಳೆ ಅಡ್ಡಿಯಾಗುತ್ತದೆ ಎಂಬ ಆತಂಕ ರೈತರಲ್ಲಿ ಮನೆ ಮಾಡಿದ್ದು, ಪೂರ್ವ ಮುಂಗಾರು ಕೈಕೊಟ್ಟ ಕಾರಣ ಕೃಷಿ ಚಟುವಟಿಕೆಗೆ ಹಿನ್ನಡೆ ಉಂಟಾಗಿತ್ತು. ಇತ್ತೀಚೆಗೆ ಹಾಲಿ ಬೆಳೆಗೆ ಕಟ್ಟು ನೀರಿ ಪದ್ಧತಿ ಮೂಲಕ ನಾಲೆಗಳಲ್ಲಿ ನೀರು ಹರಿಸಲಾಗಿತ್ತು. ನಂತರ ಕುಡಿಯುವ ಉದ್ದೇಶಕ್ಕೆ ಮಾತ್ರ ನೀರನ್ನು ಕಾಯ್ದಿರಿಸಲಾಗಿತ್ತು. ಇದೀಗ ಕೆ.ಆರ್.ಎಸ್. ಒಡಲಿಗೆ ಹೆಚ್ಚಿನ ನೀರು ಹರಿದುಬರುತ್ತಿರುವುದು ತುಸು ಸಮಾಧಾನ ಮೂಡಿಸಿದೆ.
ನಿರ್ಧಾರ ಕೈಗೊಳ್ಳುವ ಬಗ್ಗೆ ಭರವಸೆ : ಈ ಮಧ್ಯೆ ತಮಿಳುನಾಡು ಕೇಂದ್ರ ಜಲಸಂಪನ್ಮೂಲ ಇಲಾಖೆಗೆ ಮನವಿ ಮಾಡಿ ಜೂನ್ ತಿಂಗಳ ನೀರನ್ನು ಕರ್ನಾಟಕದಿಂದ ಬಿಡುಗಡೆ ಮಾಡಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿತ್ತು. ಈ ಬಗ್ಗೆ ಜಲ ಸಂಪನ್ಮೂಲ ಇಲಾಖೆ ಸಚಿವರು ಶೀಘ್ರ ಅಧಿಕಾರಿಗಳ ಸಭೆ ಕರೆದು ನೀರಿನ ಸಂಗ್ರಹದ ಕುರಿತು ಮಾಹಿತಿ ಪಡೆದು ಮುಂದಿನ ನಿರ್ಧಾರ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದ್ದರು. ಇದೀಗ ಒಳ ಹರಿವಿನ ಪ್ರಮಾಣ ಹೆಚ್ಚಿರುವುದು ತಮಿಳುನಾಡಿಗೂ ನೀರೊದಗಿಸುವ ಭರವಸೆ ಮೂಡಿಸಿದೆ.