ಹೊಸದಿಗಂತ ಡಿಜಿಟಲ್ ಡೆಸ್ಕ್:
ಸುದೀಪ್ (Sudeep) ಹಣ ಪಡೆದು ಕಾಲ್ ಶೀಟ್ ನೀಡದೇ ವಂಚಿಸಿದ್ದಾರೆ ಎಂದು ಆರೋಪ ಮಾಡಿದ್ದ ನಿರ್ಮಾಪಕ ಎಮ್.ಎನ್ ಕುಮಾರ್ (M. N. Kumar) ಇದೀಗ ಮತ್ತೆ ಪತ್ರಿಕಾಗೋಷ್ಠಿ ನಡೆಸಿ ಸುದೀಪ್ ಮೇಲೆ ಆರೋಪಗಳ ಸುರಿಮಳೆಗೈದಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕುಮಾರ್, ‘ನಾನು ಈ ಬಗ್ಗೆ ಮನೆ ಹತ್ತಿರ ಹೋದರೂ, ಮನೆಯಲ್ಲಿದ್ದರೂ ಸ್ಪಂದಿಸಲಿಲ್ಲ. ಈ ಬಗ್ಗೆ ರವಿಚಂದ್ರನ್ (Ravichandran) ಅವರ ಹತ್ತಿರವು ಮಾತನಾಡಿದ್ದೆ. ಅವರು ಕೂಡ ಸುದೀಪ್ ಗೆ ಹೇಳಿದ್ದಾರೆ. ನಾನು ಹಣ ಕೇಳಿದ್ದೆ ತಪ್ಪಾ? ರವಿಚಂದ್ರನ್ ಅವರ ಜೊತೆ ವಿಶ್ವಾಸದಿಂದ ಇದ್ದಾರೆ. ನನ್ನ ಜೊತೆಯೂ ಚೆನ್ನಾಗಿದ್ದಾರೆ. ಹಾಗಾಗಿ ರವಿಚಂದ್ರನ್ ಬಳಿ ಹೋಗಿಯೂ ಹೇಳಿದ್ದೆ’ ಎಂದರು.
ಇವತ್ತು ಸುದೀಪ್ ನಮ್ಮನ್ನ ಬಿಟ್ಟು ಹೊರ ರಾಜ್ಯದವರಿಗೆ ಚಿತ್ರ ಮಾಡುತ್ತಿದ್ದೀರಿ. ನಾನು ಕೊಟ್ಟಿರೋದನ್ನ ಕೊಟ್ಟು ಬೇರೆ ಯಾರಿಗಾದ್ರು ಹೋಗಿ ಚಿತ್ರ ಮಾಡಿಕೊಡಿ. ಈ ಹಿಂದೆ ಅವರ ಮೇಲೆ ಇದ್ದ ಅಭಿಮಾನಕ್ಕೆ ಕಮಿಷನ್ ಇಲ್ಲದೆ ಚಿತ್ರ ಹಂಚಿಕೆ ಮಾಡಿದ್ದೇವೆ. ಇದೇ ಚಿತ್ರದ ಎದುರು ತಮ್ಮ ಆಟೋಗ್ರಾಫ್ ಸಿನಿಮಾ ರಿಲೀಸ್ ಆಗಬೇಕು ಅಂತ ಹಠ ಮಾಡಿದರು. ಅದನ್ನೂ ಮಾಡಿದ್ದೇನೆ. ಅವರಿಗಾಗಿ ಎಷ್ಟೆಲ್ಲ ಸಹಾಯ ಮಾಡಿದರೂ, ಕೊನೆಗೆ ನನಗೆ ಹೀಗಾಯಿತು ಎಂದರು .
ನಾನು ಇಂಡಸ್ಟ್ರಿ ಮೂಲಕವೇ ಈ ಪ್ರಕರಣವನ್ನು ಬಗೆಹರಿಸಿಕೊಳ್ಳಲ್ಲು ರೆಡಿ ಇದ್ದೇನೆ. ನಮ್ಮ ಸಂಸ್ಥೆಗಳ ತೀರ್ಮಾನಕ್ಕೆ ನಾನು ರೆಡಿ ಇದ್ದೇನೆ. ಇಷ್ಟೆಲ್ಲ ಆದ ಮೇಲೆಯೂ ಕಾಲ್ ಶೀಟ್ ಕೊಟ್ಟರೆ ನಾನು ಅವರಿಗೆ ಚಿತ್ರ ಮಾಡ್ತೇನೆ. ಸುದೀಪ್ ಅವರು ಬಹಿರಂಗ ಸಭೆ ಮುಂದೆ ಯಾಕೆ ಬರುತ್ತಿಲ್ಲ. ನಾನು ತಪ್ಪು ಮಾಡಿದ್ರೆ ಕಾಲು ಹಿಡಿದು ಕ್ಷಮೆ ಕೇಳ್ತೇನೆ ಎಂದರು.