ಕಲಬುರಗಿಯಲ್ಲಿ ಮಳೆ ಅಭಾವ: ಬರಪೀಡಿತ ಜಿಲ್ಲೆ ಘೋಷಿಸುವ ಕುರಿತು ಚರ್ಚಿಸಿ ನಿರ್ಧಾರ ಎಂದ ಸಚಿವ ಖರ್ಗೆ

ಹೊಸದಿಗಂತ ವರದಿ, ಕಲಬುರಗಿ:

ಜಿಲ್ಲೆಯಲ್ಲಿ ಮಳೆ ಅಭಾವ ಎದುರಾಗಿದೆ. ಈ‌ ಹಿನ್ನೆಲೆಯಲ್ಲಿ ಜುಲೈ 15 ರಂದು ಸಚಿವ ಸಂಪುಟದ ಉಪಸಮಿತಿ ಸಭೆ ಕರೆಯಲಾಗಿದ್ದು, ಅಂದು ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸುವ ಸಾಧ್ಯತೆಗಳ ಕುರಿತಂತೆ ಚರ್ಚಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಜಿಲ್ಲಾ‌ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಹೇಳಿದರು.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮೋಡ ಬಿತ್ತನೆ ಕುರಿತಂತೆ ಈಗಾಗಲೇ ಕಂದಾಯ ಸಚಿವರು ಸ್ಪಷ್ಟನೆ ನೀಡಿದ್ದಾರೆ. ಆದರೆ ಮಳೆ ಕೊರತೆ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸುವ ಸಾಧ್ಯತೆಗಳ ಕುರಿತಂತೆ ಜುಲೈ 15 ರಂದು ನಡೆಯುವ ಸಚಿವ ಸಂಪುಟದ‌ ಉಪಸಮಿತಿ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.

ನಗರದ ಅಪ್ಪನ ಕೆರೆಯಲ್ಲಿ ಬಫರ್ ಜೋನ್ ನಲ್ಲಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪರಿಸರ ಪ್ರಭಾವ ಮೌಲ್ಯಮಾಪನ ವರದಿ ತರಿಸದೆ ಕೆಲಸ ಆರಂಭಿಸಿದ್ದು ಕೆರೆ ಸಂರಕ್ಷಣಾ‌ ಕಾಯ್ದೆ ಉಲ್ಲಂಘನೆಯಾಗಿದೆ. ಹಾಗಾಗಿ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದ್ದು ತನಿಖೆಗೆ ಆದೇಶಿಸಿದ್ದೇನೆ. ಆದರೆ, ಆ ಸ್ಥಳದಲ್ಲಿ ಸಾರ್ವಜನಿಕರು ಆಯತಪ್ಪಿ‌ ಬೀಳುವ ಸಂಭವವಿರುವುದರಿಂದ ಬೇಲಿ ಹಾಕಿಸಲಾಗುತ್ತಿದೆ ಎಂದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ 18000 ಶಿಕ್ಷಕರ ಹುದ್ದೆಗಳೂ ಸೇರಿದಂತೆ ರಾಜ್ಯದಲ್ಲಿ‌ ಖಾಲಿ ಇರುವ 2.50 ಲಕ್ಷ ಸರ್ಕಾರದ ವಿವಿಧ ಇಲಾಖೆಗಳ ಹುದ್ದೆಗಳನ್ನ ಹಂತಹಂತವಾಗಿ ಭರ್ತಿ ಮಾಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ‌ ಉತ್ತರಿಸುತ್ತಾ ಅವರು ಹೇಳಿದರು.

ಜಿಲ್ಲೆಯಲ್ಲಿ ಪೊಲೀಸರಿಂದ ಹಫ್ತಾ ವಸೂಲಿ ಮಾಡಿಸಲಾಗುತ್ತಿದೆ ಎಂದು ಆರೋಪಿಸಿ ಪೇದಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾದ ಪ್ರಕರಣ ಹಾಗೂ ಆ ಬಗ್ಗೆ ಮತ್ತೊಬ್ಬ ಪೇದೆ ವಿಡಿಯೋ ಮೂಲಕ ಹೇಳಿರುವುದರ ಕುರಿತು ಸಮಗ್ರ ತನಿಖೆಗೆ ಆದೇಶಿಸಿದ್ದೇನೆ ಎಂದ ಸಚಿವರು ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಎನ್ನಲಾದ ಪೇದೆ ಆ‌ ಕುರಿತಾದ ವರದಿಗಳನ್ನು ಈಗಾಗಲೇ ನಿರಾಕರಣೆ ಮಾಡಿದ್ದು ತನಿಖೆಯ ನಂತರ ವಿವರಗಳು ಗೊತ್ತಾಗಲಿವೆ ಎಂದರು.

ನಗರ ವ್ಯಾಪ್ತಿಯಲ್ಲಿ ಚರಂಡಿಗಳಲ್ಲಿ ಮಳೆ ನೀರು ಸರಾಗವಾಗಿ ಸಾಗಲು ಸೂಕ್ತ ಕ್ರಮ ಕೈಗೊಳ್ಳುವಂತೆ ‌ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಪ್ರಗತಿ‌ ಪರಿಶೀಲನಾ ಸಭೆ ನಡೆಸಲಾಗುತ್ತಿದೆ. ಅದಾದ ಮೇಲೆ ಮೂರು ತಿಂಗಳಿಗೊಮ್ಮೆ ಕೆಡಿಪಿ ಸಭೆ ನಡೆಸಲಾಗುವುದು ಎಂದು‌ ಸಚಿವರು ಹೇಳಿದರು.

ಸೋಮವಾರ ಪೆನ್ ಡ್ರೈವ್ ಬಿಡುಗಡೆ ಮಾಡುವುದಾಗಿ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ ಎಂದು ಪತ್ರಕರ್ತರು ಪ್ರಶ್ನಿಸಿದಾಗ ಉತ್ತರಿಸಿದ ಪ್ರಿಯಾಂಕ್ ಖರ್ಗೆ, ಸೋಮವಾರ ಏಕೆ, ಇವತ್ತೆ ಬಿಡುಗಡೆ ಮಾಡಲಿ ಅಥವಾ ನಾಳೆನೆ ಬಿಡುಗಡೆ ಮಾಡಲಿ ಎಂದು ಟಾಂಗ್ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!