ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಬ್ಜಿ ಆನ್ಲೈನ್ ಆಟದ ಮೂಲಕ ಪರಿಚಯವಾದ ಯುವಕನಿಗಾಗಿ ತನ್ನ ನಾಲ್ಕು ಮಕ್ಕಳನ್ನು ಕಟ್ಟಿಕೊಂಡು ಪಾಕ್ ಮಹಿಳೆ ಸೀಮಾ ಹೈದರ್ ಇತ್ತೀಚೆಗೆ ಭಾರತಕ್ಕೆ ಬಂದಿದ್ದಳು.
ಬಳಿಕ ಆಕೆ, ಮಕ್ಕಳು, ಪ್ರಿಯಕರ ಸಚಿನ್ ಸಿಂಗ್ ಎಲ್ಲರೂ ಪೊಲೀಸರು ವಶಕ್ಕೆ ಪಡೆದಿದ್ದರು.
ಇದೀಗ ಸೌದಿ ಅರೇಬಿಯಾದಲ್ಲಿ ಇರುವ ಸೀಮಾ ಹೈದರ್ ಪತಿ ಗುಲಾಂ ಹೈದರ್ ಭಾವನಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ‘ನನ್ನ ಪತ್ನಿ ಮತ್ತು ಮಕ್ಕಳನ್ನು ವಾಪಸ್ ಪಾಕಿಸ್ತಾನಕ್ಕೆ ಕಳಿಸಿ’ ಎಂದು ಮೋದಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಸೀಮಾ ಹೈದರ್ ಮತ್ತು ಗುಲಾಂ ಹೈದರ್ ನಡುವೆ ಜಗಳ ಆಗುತ್ತಿತ್ತು. ಗುಲಾಂ ಹೈದರ್ ಉದ್ಯೋಗಕ್ಕಾಗಿ ಸೌದಿ ಅರೇಬಿಯಾದಲ್ಲಿ ಇದ್ದರೆ, ಅವನೊಂದಿಗೆ ಇರಲು ಸಾಧ್ಯವಿಲ್ಲ ಎಂದು ಹೇಳಿ ಸೀಮಾ ಪಾಕಿಸ್ತಾನದಲ್ಲಿಯೇ ತನ್ನ ಮಕ್ಕಳೊಂದಿಗೆ ವಾಸವಾಗಿದ್ದರು.
ಆ ಬಳಿಕ 2020ರಲ್ಲಿ ಪಬ್ಜಿ ಆಟದ ಮೂಲಕ ಸಚಿನ್ ಸಿಂಗ್ ಪರಿಚಯವಾದ ಮೇಲೆ, ಅವನೊಂದಿಗಿನ ಸ್ನೇಹ ಪ್ರೀತಿಯಾಯಿತು. 2022ರ ಮಾರ್ಚ್ ತಿಂಗಳಲ್ಲಿ ಸೀಮಾ ಮತ್ತು ಸಚಿನ್ ಒಮ್ಮೆ ನೇಪಾಳದಲ್ಲಿ ಭೇಟಿಯನ್ನೂ ಆಗಿದ್ದರು. ತಾವಿಬ್ಬರು ಮದುವೆಯನ್ನೂ ಆಗಲೇಬೇಕು ಎಂದು ನಿರ್ಧರಿಸಿಬಿಟ್ಟಿದ್ದರು. ಧೈರ್ಯ ಮಾಡಿ ಸೀಮಾ ಭಾರತದೊಳಗೆ ಕಾಲಿಟ್ಟಿದ್ದಳು. ಈಕೆ ಮಕ್ಕಳೊಟ್ಟಿಗೆ ಪಾಕಿಸ್ತಾನದಿಂದ ದುಬೈಗೆ ವಿಮಾನದಲ್ಲಿ ಹೋಗಿ, ಅಲ್ಲಿಂದ ನೇಪಾಳದ ಕಠ್ಮಂಡುವಿಗೆ ವಿಮಾನದಲ್ಲಿಯೇ ಬಂದು, ನೇಪಾಳದ ಗಡಿಯಿಂದ ಭಾರತಕ್ಕೆ ಅಕ್ರಮವಾಗಿ ನುಸುಳಿದ್ದಳು.
ಇದೀಗ ಗುಲಾಂ ಹೈದರ್ ಅವರು ವಿಡಿಯೊ ಮೂಲಕ ಪ್ರಧಾನಿ ಮೋದಿ ಸರ್ಕಾರಕ್ಕೆ ಮನವಿ ಮಾಡಿದ್ದು, ‘ನನಗೆ ನನ್ನ ಹೆಂಡತಿ-ಮಕ್ಕಳು ಬೇಕು. ಪಾಕಿಸ್ತಾನ ನಮ್ಮ ಊರು. ನನ್ನ ಪತ್ನಿಗೆ ಭಾರತದ ವ್ಯಕ್ತಿ ಪಬ್ಜಿ ಆಟದ ಮೂಲಕ ಆಮಿಷವೊಡ್ಡಿದ್ದಾನೆ. ಆಕೆಯ ಮನಸು ಕೆಡಿಸಲಾಗಿದೆ’ ಎಂದು ಅವರು ಆರೋಪಿಸಿದ್ದಾರೆ. ನನ್ನ ಪತ್ನಿ-ಮಕ್ಕಳು ಸುರಕ್ಷಿತವಾಗಿ ಮರಳಬೇಕು. ಇದಕ್ಕೆ ಭಾರತದ ಮೋದಿ ಸರ್ಕಾರ ಸಹಾಯ ಮಾಡಲೇಬೇಕು. ನಾವು ಕುಟುಂಬದವರು ಎಲ್ಲ ಒಂದಾಗಬೇಕು ಎಂದು ಅತ್ಯಂತ ಭಾವುಕವಾಗಿ, ಕೈಜೋಡಿಸಿ ಮನವಿ ಮಾಡಿದ್ದಾರೆ.