ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವು ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದೆ. ಚೋಟಾ ಧಾರಾ ಸೇರಿದಂತೆ ಹಲವು ಗ್ರಾಮಗಳಲ್ಲಿ ದಿಢೀರ್ ಪ್ರವಾಹದಿಂದಾಗಿ ಸುಮಾಡೋ ಕಾಜಾ-ಗ್ರಾಂಫು ಮಾರ್ಗದಲ್ಲಿ ಭೂಕುಸಿತ ಸಂಭವಿಸಿದೆ. ಗುಡ್ಡ ಕುಸಿತದಿಂದ ರಸ್ತೆ ಸಂಚಾರ ಸ್ಥಗಿತಗೊಂಡಿದೆ.
ಸ್ಪಿತಿಯಿಂದ ಮನಾಲಿಗೆ ಬರುತ್ತಿದ್ದ 30 ಕಾಲೇಜು ವಿದ್ಯಾರ್ಥಿಗಳನ್ನು ಪೊಲೀಸರು ರಕ್ಷಿಸಿದ್ದಾರೆ. ರಸ್ತೆಗಳ ಮೇಲೆ ಬಿದ್ದ ಮಣ್ಣನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದ್ದು, ಮುಂದಿನ 48 ಗಂಟೆಗಳಲ್ಲಿ ಹಿಮಾಚಲ ಪ್ರದೇಶದ ಏಳು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ಚಂಬಾ, ಕಂಗ್ರಾ, ಕುಲು, ಮಂಡಿ, ಉನಾ, ಹಮೀರ್ಪುರ್ ಮತ್ತು ಬಿಲಾಸ್ಪುರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಐಎಂಡಿ ಅಧಿಕಾರಿಗಳು ರೆಡ್ ಅಲರ್ಟ್ ಘೋಷಿಸಿದ್ದಾರೆ.
ಶಿಮ್ಲಾ, ಸೋಲನ್ ಮತ್ತು ಸಿರ್ಮೌರ್ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಸ್ಪಿತಿ ಜಿಲ್ಲೆಯಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ. ಪ್ರವಾಹದಿಂದಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಸನ್ವಾರ ರೈಲು ನಿಲ್ದಾಣದ ಸುರಂಗದಲ್ಲಿ ಪ್ರವಾಹದ ನೀರಿನಿಂದ ರೈಲು ಸೇವೆಗಳನ್ನು ನಿಲ್ಲಿಸಲಾಗಿದೆ. ಹಠಾತ್ ಪ್ರವಾಹ ಮತ್ತು ಹಿಮಪಾತದಿಂದಾಗಿ ಲಾಹುಲ್-ಸ್ಪಿತಿ ಮಾರ್ಗದ ರಸ್ತೆಗಳು ಹಾನಿಗೊಳಗಾಗಿವೆ.