ಹೊಸದಿಗಂತ ಡಿಜಿಟಲ್ ಡೆಸ್ಕ್:
ಖಾಲಿಸ್ತಾನಿ ಬೆಂಬಲಿಗರು ಕೆನಡಾದ ಭಾರತದ ರಾಯಭಾರಿ ಕಚೇರಿ ಮುಂದೆ ಭಾರತದ ವಿರುದ್ಧ ಪ್ರತಿಭಟನೆ ನಡೆಸಿದರು. ಟೊರೊಂಟೊದಲ್ಲಿನ ರಾಯಭಾರ ಕಚೇರಿಯ ಮುಂದೆ ಜುಲೈ 8 ರಂದು ಸಾಮೂಹಿಕ ಆಂದೋಲನಕ್ಕೆ ಕರೆ ನೀಡಿದರು. ಪೋಸ್ಟರ್ ಗಳ ಮೂಲಕ ದೊಡ್ಡ ಮಟ್ಟದ ಪ್ರಚಾರ ಮಾಡಲಾಗಿತ್ತು. ನಿನ್ನೆ, ನೂರಾರು ಜನರು ಭಾರತೀಯ ಕಾನ್ಸುಲೇಟ್ ಮುಂದೆ ಖಾಲಿಸ್ತಾನ್ ಧ್ವಜಗಳೊಂದಿಗೆ ಪ್ರದರ್ಶನವನ್ನು ನಡೆಸಿದರು. ಭಾರತೀಯರು ಕೂಡ ಅದೇ ರೀತಿ ಪ್ರತಿಕ್ರಿಯಿಸಿದ್ದು, ಭಾರತವನ್ನು ಬೆಂಬಲಿಸಿ ಘೋಷಣೆಗಳು ಮೊಳಗಿದವು. ಖಲಿಸ್ತಾನಿಗಳು ಆಂದೋಲನಕ್ಕೆ ಭಾರತೀಯರು ತ್ರಿವರ್ಣ ಧ್ವಜ ಹಿಡಿದು ದಿಟ್ಟ ಉತ್ತರ ನೀಡಿದ್ದಾರೆ.
ಖಲಿಸ್ತಾನಿಗಳು ಕೆನಡಾ, ಯುಎಸ್ಎ ಮತ್ತು ಯುಕೆಗಳಲ್ಲಿ ಭಾರತ ವಿರೋಧಿ ಪ್ರತಿಭಟನೆಗಳಿಗೆ ಕರೆ ನೀಡಿದರು. ಇದರಿಂದಾಗಿ ಆ ದೇಶಗಳಲ್ಲಿರುವ ಭಾರತೀಯ ರಾಯಭಾರಿ ಕಚೇರಿಗಳ ಮುಂದೆ ಭಾರೀ ಭದ್ರತೆ ಏರ್ಪಡಿಸಲಾಗಿದೆ. ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿರುವ ಭಾರತೀಯ ಕಚೇರಿಗೆ ಭದ್ರತೆ ಹೆಚ್ಚಿಸಲಾಗಿದೆ. ಭಾರತೀಯ ರಾಜತಾಂತ್ರಿಕ ತರಂಜಿತ್ ಸಿಂಗ್ ಪರಿಸ್ಥಿತಿಯನ್ನು ಪರಿಶೀಲಿಸಿದರು.
ಇತ್ತೀಚೆಗೆ ಮೂವರು ಖಲಿಸ್ತಾನಿ ಭಯೋತ್ಪಾದಕರನ್ನು ಅನುಮಾನಾಸ್ಪದವಾಗಿ ಹತ್ಯೆ ಮಾಡಲಾಗಿತ್ತು. ಕೆನಡಾದಲ್ಲಿ ಹರ್ದೀಪ್ ಸಿಂಗ್ ನಿಜ್ಜರ್ ಎಂಬ ಭಯೋತ್ಪಾದಕನನ್ನು ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದಾರೆ. ಯುಕೆಯಲ್ಲಿ ಇಬ್ಬರು ಖಲಿಸ್ತಾನಿ ಭಯೋತ್ಪಾದಕರು ಹತರಾಗಿದ್ದಾರೆ. ಖಲಿಸ್ತಾನಿ ಬೆಂಬಲಿಗರು ಇದಕ್ಕೆ ಭಾರತವೇ ಕಾರಣ ಎಂದು ಆರೋಪಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೆನಡಾದಾದ್ಯಂತ ಭಾರತೀಯ ರಾಜತಾಂತ್ರಿಕರಿಗೆ ಬೆದರಿಕೆ ಹಾಕುವ ಪೋಸ್ಟರ್‌ಗಳನ್ನು ಹಾಕಲಾಗಿದೆ. ಈ ಕ್ರಮಗಳು ಉಭಯ ದೇಶಗಳ ನಡುವಿನ ಸಂಬಂಧವನ್ನು ಹಾಳು ಮಾಡುತ್ತವೆ ಎಂದು ಭಾರತ ದೃಢವಾಗಿ ಪ್ರತಿಕ್ರಿಯಿಸಿದೆ.