ಕುಮಾರಸ್ವಾಮಿ ಬಳಿ ಸರ್ಕಾರದ ವಿರುದ್ದ ದಾಖಲೆ ಇದ್ದರೆ ಬಿಡುಗಡೆ ಮಾಡಲಿ: ಸಚಿವ ಚಲುವರಾಯಸ್ವಾಮಿ

ಹೊಸದಿಗಂತ ವರದಿ ಮಂಡ್ಯ :

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬಳಿ ಸರ್ಕಾರದ ವಿರುದ್ದ ದಾಖಲೆ ಇದ್ದರೆ ಬಿಡುಗಡೆ ಮಾಡಲಿ. ಅದರ ಬಗ್ಗೆ ನನಗೇನೂ ಕುತೂಹಲ ಇಲ್ಲ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದ್ದಾರೆ.

ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ವಿರುದ್ಧ ಏನಾದರೂ ದಾಖಲೆಗಳು ಇದ್ದರೆ ಬಿಡುಗಡೆ ಮಾಡಬಾರದು ಎಂದು ಯಾರೂ ಹೇಳಿಲ್ಲ. ದಾಖಲೆ ಬಿಡುಗಡೆ ಮಾಡಲಿ ಸಂತೋಷ. ಬೇಕಿದ್ದರೆ ಸದನದಲ್ಲೇ ದಾಖಲೆ ಬಿಡುಗಡೆ ಮಾಡಲಿ ಎಂದು ಒತ್ತಾಯಿಸಿದರು.

ಕೇವಲ ದಾಖಲೆ ಇದೆ, ಬಿಡುಗಡೆ ಮಾಡುತ್ತೇನೆಂದಷ್ಟೇ ಹೇಳಿದರೆ ಸಾಲದು, ಬಿಡುಗಡೆ ಮಾಡಿ ಮಾತನಾಡಬೇಕು. ಆದರೆ ಜನಾರ್ಧನರೆಡ್ಡಿ ಬಾಂಬ್ ರೀತಿ ಆಗುವುದು ಬೇಡ ಅಷ್ಟೇ ಎಂದು ಟೀಕಿಸಿದರು.

ಈಗ ನನ್ನ ಸರದಿ
ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ನಾಯಕರು ಬೆಳೆಯುವುದನ್ನು ಸಹಿಸಲ್ಲ ಎಂದು ಕುಮಾರಸ್ವಾಮಿ ಹೆಸರೇಳದೆ ಟೀಕಿಸಿದ ಸಚಿವ ಚಲುವರಾಯಸ್ವಾಮಿ, ಎಲ್ಲಾ ಒಕ್ಕಲಿಗರನ್ನು ಅವರು ದೂರ ಇಡುತ್ತಾ ಬಂದಿದ್ದಾರೆ. ಈಗ ನನ್ನ ಸರದಿ ಬಂದಿದೆ. ಹಾಗಾಗಿ ನನ್ನನ್ನೂ ದೂರ ಇಟ್ಟಿದ್ದಾರೆ ಎಂದು ತಿಳಿಸಿದರು.

ಮಂತ್ರಿ ಆಗಿರುವುದನ್ನು ಸಹಿಸುವುದಕ್ಕೆ ಆಗುತ್ತಿಲ್ಲ
ಮತ್ತೆ ನಾನು ಎಂದೂ ಗೆಲ್ಲುವುದಿಲ್ಲ ಎಂದು ಅಂದುಕೊಂಡಿದ್ದರು. ಮಂಡ್ಯದ ಜನ ನನ್ನ ಪಾಪದ ಹುಡುಗ ಎಂದು ಗೆಲ್ಲಿಸಿಬಿಟ್ಟಿದ್ದಾರೆ. ನಾನು ಈಗ ಮಂತ್ರಿ ಆಗಿದ್ದೇನೆ. ಅದನ್ನು ಹೇಗೆ ಅವರು ಸಹಿಸಿಕೊಳ್ಳುತ್ತಾರೆ?, ಅವರಿಗೆ ಕಷ್ಟ ಆಗುತ್ತೆ, ನಾವು ಅವರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ವ್ಯಂಗ್ಯವಾಡಿದರು.

ನಮ್ಮ ಬೆಳವಣಿಗೆಯನ್ನು ಸಹಿಸುವುದಕ್ಕೆ ಆಗದಿರುವಂತಹ ಪ್ರವೃತ್ತಿ ಅವರದ್ದು. ನಮಗೇನೂ ಅವರ ಮೇಲೆ ದ್ವೇಷ ಇಲ್ಲ, ಅವರಿಗೇ ನಮ್ಮನ್ನು ಕಂಡರೆ ಆಗುವುದಿಲ್ಲ. ಇವರು ಯಾರನ್ನೂ ಕೂಡ ಸಹಿಸಲ್ಲ ಎಂಬುದನ್ನು ಹಳೇ ಮೈಸೂರು ಭಾಗದ ಜನತೆ ಅರ್ಥ ಮಾಡಿಕೊಳ್ಳುತ್ತಿದ್ದಾರೆ. ನಾನು ಒಕ್ಕಲಿಗ ನಾಯಕ ಎಂಬ ಕಾರಣಕ್ಕೆ ನನ್ನ ಮೇಲೆ ದ್ವೇಷ ಕಾರುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಅವರ ಬೇಳೆಕಾಳು ಬೇಯಲ್ಲ
ದೇವೇಗೌಡರು ಹಿರಿಯರು, ಪ್ರಧಾನಿಯಾಗಿದ್ದವರು. ನಾವೆಲ್ಲಾ ಅವರನ್ನು ಪ್ರೀತಿ ಮಾಡುತ್ತೇವೆ. ಆದರೆ ಕುಮಾರಸ್ವಾಮಿ ಅವರು ದೇವೇಗೌಡರ ಹೆಸರನ್ನು ತರದೆ ರಾಜಕೀಯ ಮಾಡುವುದಕ್ಕೆ ಆಗುವುದೇ ಇಲ್ಲ. ಅದಕ್ಕಾಗಿ ನಿತ್ಯ ದೇವೇಗೌಡರ ಹೆಸರನ್ನು ತರುತ್ತಾರೆ ಎಂದರು.

ಸದನದಲ್ಲಿ ದೇವೇಗೌಡರ ಹೆಸರನ್ನು ನಾವು ಬಳಸಿಲ್ಲ, ದೇವೇಗೌಡರ ಹೆಸರನ್ನು ಬಳಸುವವರೇ ಅವರು. ಗೌಡರ ಹೆಸರನ್ನು ತೆಗೆಯದಿದ್ದರೆ ಅವರ ಬೇಳೆಕಾಳು ಬೇಯಲ್ಲ ಅನ್ನುವುದು ಅವರಿಗೂ ಗೊತ್ತಿದೆ. ಆದ್ದರಿಂದಲೇ ನಿತ್ಯ ದೇವೇಗೌಡರ ಹೆಸರನ್ನು ಬಳಸಿಯೇ ಮಾತು ಪ್ರಾರಂಭಿಸುತ್ತಾರೆ ಎಂದು ಟಾಂಗ್ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!