ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಭಾರತದಲ್ಲಿ ಭಾರೀ ಮಳೆಯಾಗುತ್ತಿದ್ದು, ಹಳ್ಳಿಗಳು, ಹೊಲಗಳು, ರಸ್ತೆಗಳು ಮತ್ತು ಕಾಡುಗಳು ಪ್ರವಾಹದಲ್ಲಿ ಮುಳುಗಿವೆ. ಈ ಮಳೆಯ ಜತೆಗೆ ಗುಡುಗು, ಸಿಡಿಲು, ಅಪಾಯಕಾರಿಯಾಗಿ ಪರಿಣಮಿಸಿದೆ. ಧಾರಾಕಾರ ಮಳೆ ಮತ್ತು ಸಿಡಿಲಿಗೆ ಉತ್ತರ ಪ್ರದೇಶ ರಾಜ್ಯದಲ್ಲಿ 34 ಜನರು ಸಾವನ್ನಪ್ಪಿದ್ದಾರೆ ಎಂದು ಸರ್ಕಾರ ಸೋಮವಾರ ತಿಳಿಸಿದೆ. ಒಟ್ಟು ಸಾವುಗಳಲ್ಲಿ 17 ಜನರು ಸಿಡಿಲಿಗೆ ಸಾವನ್ನಪ್ಪಿದ್ದರೆ, 12 ಜನರು ಭಾರೀ ಪ್ರವಾಹದಿಂದ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಇನ್ನೂ ಐವರು ಭೂಕುಸಿತದಿಂದ ಸಾವನ್ನಪ್ಪಿದ್ದಾರೆ.
ಏತನ್ಮಧ್ಯೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ಅತಿವೃಷ್ಟಿಯಿಂದ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡುವುದಾಗಿ ಸೂಚಿಸಿದರು. ಹವಾಮಾನ ಇಲಾಖೆ ಪ್ರಕಾರ ರಾಜ್ಯದಲ್ಲಿ 11 ಸೆಂ.ಮೀ ಮಳೆ ದಾಖಲಾಗಿದೆ. ಇದರಿಂದಾಗಿ ನದಿಗಳಲ್ಲಿ ನೀರಿನ ಮಟ್ಟ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಭಾರೀ ಮಳೆಯಿಂದ ರಾಜ್ಯದಾದ್ಯಂತ ಹರಿಯುತ್ತಿರುವ ಗಂಗಾ, ರಾಮಗಂಗಾ ನದಿಗಳು. ಯಮುನಾ ಮತ್ತು ರಪ್ತಿ ನದಿಗಳಲ್ಲಿ ಪರಿಸ್ಥಿತಿ ಅಪಾಯಕಾರಿಯಾಗಿದೆ. ಭಾರತೀಯ ಮಾಪನ ಇಲಾಖೆ ಪ್ರಕಾರ, ರಾಜ್ಯದ 75 ಜಿಲ್ಲೆಗಳ ಪೈಕಿ 68 ಜಿಲ್ಲೆಗಳು ಮಳೆಯಿಂದ ತೀವ್ರವಾಗಿ ಬಾಧಿತವಾಗಿವೆ.
ದೆಹಲಿ, ಹರಿಯಾಣ, ಪಂಜಾಬ್, ರಾಜಸ್ಥಾನ, ಹಿಮಾಚಲ, ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರದ ಹಲವು ಭಾಗಗಳಲ್ಲಿ ನಿರಂತರ ಮಳೆಯಾಗುತ್ತಿದೆ. ಉತ್ತರಾಖಂಡ, ಹಿಮಾಚಲ, ಪಂಜಾಬ್ ಮತ್ತು ರಾಜಸ್ಥಾನದಲ್ಲಿ ನದಿಗಳು ತುಂಬಿ ಹರಿಯುತ್ತಿವೆ. ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳ ಹಲವು ಭಾಗಗಳಲ್ಲಿ ಹೆಚ್ಚಿನ ಪ್ರಮಾಣದ ಪ್ರವಾಹದಿಂದಾಗಿ ಸೇತುವೆಗಳು, ರಸ್ತೆಗಳು ಮತ್ತು ರೈಲು ಹಳಿಗಳು ಹಾನಿಗೊಳಗಾಗಿವೆ.