ರಾಹುಲ್ ಗಾಂಧಿಯಿಂದ ಈಸ್ಟ್‌ ಅಂಡ್‌ ವೆಸ್ಟ್‌ ಭಾರತ್‌ ಜೋಡೋ ಯಾತ್ರೆ: ಡಿ.ಕೆ. ಶಿವಕುಮಾರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕನ್ಯಾಕುಮಾರಿಯಿಂದ ಉತ್ತರದ ಕಾಶ್ಮೀರವದವರೆಗೆ ಭಾರತ್ ಜೋಡೋ ಯಾತ್ರೆ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ, ಮುಂದಿನ ದಿನ ಮತ್ತೊಮ್ಮೆ ಪೂರ್ವದಿಂದ ಪಶ್ಚಿಮಕ್ಕೆ ಭಾರತ್‌ ಜೋಡೋ ಯಾತ್ರೆಯನ್ನು ಮಾಡಲಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್‌ ಗಾಂಧಿ ಅವರ ಭಾರತ್‌ ಜೋಡೋ ಯಾತ್ರೆ ಹೋದ ಕಡೆಗಳಲ್ಲಿ ಎಲ್ಲವೂ ಕಾಂಗ್ರೆಸ್‌ ಜಯಭೇರಿ ಬಾರಿಸಿದೆ. ಅವರು ಈಸ್ಟ್‌ ಅಂಡ್‌ ವೆಸ್ಟ್‌ ಭಾರತ್‌ ಜೋಡೋ ಯಾತ್ರೆ ಮಾಡಲು ಚಿಂತನೆ ನಡೆಸಿದ್ದಾರೆ. ಈ ಯಾತ್ರೆಗೆ ಹಿನ್ನಡೆಯನ್ನುಂಟು ಮಾಡುವ ಉದ್ದೇಶದಿಂದಲೇ ಷಡ್ಯಂತ್ರವನ್ನು ಮಾಡಲಾಗುತ್ತಿದೆ. ಆದ್ದರಿಂದ ಬಿಜೆಪಿ ಹಾಗೂ ಕಾಂಗ್ರೆಸ್‌ ವಿರೋಧಿ ಪಕ್ಷಗಳಿಗೆ ಬುದ್ಧಿ ಕಲಿಸಲಿಕ್ಕೆಂದೇ ಅಖಿಲ ಭಾರತ ಕಾಂಗ್ರೆಸ್‌ ಸಮಿತಿ (AICC) ಕಡೆಯಿಂದ ಒಂದು ನಿರ್ಧಾರ ಮಾಡಲಾಗಿದೆ. ದೇಶದ ಉದ್ದಗಲಕ್ಕೂ ರಾಹುಲ್ ಗಾಂಧಿ ಪರವಾಗಿ ನಿಲ್ಲುವ ಸಂದೇಶವನ್ನು ವಿರೋಧಿಗಳಿಗೆ ಕಳಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಜು.12ರಂದು ಕಾಂಗ್ರೆಸ್‌ನಿಂದ ದೇಶಾದ್ಯಂತ ಕಪ್ಪು ಪಟ್ಟಿ ಕಟ್ಟಿಕೊಂಡು ಮೌನಪ್ರತಿಭಟನೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ದೇಶಾದ್ಯಂತ ಪ್ರತಿಭಟನೆ ಮಾಡಲಾಗುತ್ತದೆ. ಇನ್ನು ಕರ್ನಾಟಕದಲ್ಲಿ ಎಲ್ಲ ಶಾಸಕರು, 30 ಜಿಲ್ಲೆಗಳ ಕಾಂಗ್ರೆಸ್‌ ಜಿಲ್ಲಾಧ್ಯಕ್ಷರು, ತಾಲೂಕು ಮತ್ತು ಬ್ಲಾಕ್ ಮಟ್ಟದ ಅಧ್ಯಕ್ಷರು ಕೂಡ ಭಾಗಿ ಆಗುತ್ತಾರೆ. ಇನ್ನು ಪ್ರತಿಭಟನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ನಾನೂ ಕೂಡ ಪ್ರತಿಭಟನೆಯಲ್ಲಿ ಭಾಗವಹಿಸುತ್ತೇನೆ. ಜು.12ರಂದು ಅಧಿವೇಶನ ಇದ್ದರೂ ನಾವು ಬೇರೆಯವರಿಗೆ ಜವಾಬ್ದಾರಿ ವಹಿಸಿ ಭಾಗವಹಿಸುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.

ರಾಹುಲ್‌ ಗಾಂಧಿ ಅವರು ಕರ್ನಾಟಕದಲ್ಲಿ ಮಾತನಾಡಿದ್ದ ಬಗ್ಗೆ ನ್ಯಾಯಾಲಯದಲ್ಲಿ ತೀರ್ಪು ಸಿಕ್ಕಿದೆ. ಅವರನ್ನು ರಾಜಕೀಯದಲ್ಲಿ ಮುಗಿಸಬೇಕು ಅಂತಾ ದೊಡ್ಡ ಷಡ್ಯಂತ್ರ ನಡೆಸಲಾಗುತ್ತಿದೆ. ಬರೋಬ್ಬರಿ 7 ಲಕ್ಷ ಮತಗಳ ಅಂತರದಲ್ಲಿ ಗೆದ್ದುಬಂದ ಸಂಸದರನ್ನು ರಾತ್ರೋ ರಾತ್ರಿ ಇಳಿಸಿದ್ದಾರೆ. ಆದರೆ, ಅವರಿಗೆ ಭಾರತ್‌ ಜೋಡೋ ಯಾತ್ರೇಲಿ ಸಿಕ್ಕಿರೋ ಪ್ರೀತಿ ಅವರ ಮೇಲಿದೆ. ಅವರು ಜೋಡೋ ಯಾತ್ರೆಲಿ ಎಲ್ಲೆಲ್ಲಿ ಹೋಗಿದ್ದಾರೆ ಎಲ್ಲಾ ಕಡೆಯೂ ಗೆದ್ದಿದ್ದೇವೆ ಎಂದು ಹೇಳಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!