ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಗಾವಿ ಜಿಲ್ಲೆಯ ನಂದಿಪರ್ವತ ಜೈನ ಕ್ಷೇತ್ರದಲ್ಲಿ ವಾಸ್ತವ್ಯವಿದ್ದ ಆಚಾರ್ಯ ಮುನಿಶ್ರೀ ಕಾಮಕುಮಾರ ನಂದಿ ಮಹಾರಾಜರ ಹತ್ಯೆಯನ್ನು ಖಂಡಿಸಿ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ನೇತೃತ್ವದಲ್ಲಿ ಸೋಮವಾರ ಶ್ರವಣಬೆಳಗೊಳದಲ್ಲಿ ಶಾಂತಿಯುತ ಪ್ರತಿಭಟನಾ ಮೆರವಣಿಗೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಮಾತನಾಡಿ, ಅಹಿಂಸಾ ಪರಮೋ ಧರ್ಮ ಎಂದು ಬದುಕುತ್ತಿರುವ ಜೈನ ಮುನಿಗಳು ಹಾಗೂ ಸಾಧು ಸಂತರಿಗೆ ರಕ್ಷಣೆ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಮುನಿಗಳು ಯಾವಾಗಲೂ ಕಾಲ್ನಡಿಗೆಯಲ್ಲೇ ವಿಹಾರ ಮಾಡುತ್ತಾರೆ. ಯಾವುದೇ ವಾಹನಗಳನ್ನು ಬಳಸುವುದಿಲ್ಲ. ನಡೆಯುವಾಗ ಸಣ್ಣ ಕ್ರಿಮಿ, ಕೀಟಗಳಿಗೂ ಹಿಂಸೆ ಆಗಬಾರದು ಎಂದು ಜಾಗೃತಿ ವಹಿಸುತ್ತಾರೆ. ಅಂತಹ ಮುನಿಗಳನ್ನು ಬರ್ಬರವಾಗಿ ಹತ್ಯೆ ಮಾಡಿರುವುದು ಇಡೀ ಜೈನ ಸಮಾಜಕ್ಕೆ ಆಘಾತ ಉಂಟು ಮಾಡಿದೆ. ಅಲ್ಪ ಸಂಖ್ಯಾತರಾದ ಜೈನ ಸಮುದಾಯಕ್ಕೆ ಸೂಕ್ತ ರಕ್ಷಣೆ ಒದಗಿಸಬೇಕು. ಈ ಹೇಯ ಕೃತ್ಯ ಮಾಡಿದ ಹಂತಕರಿಗೆ ಕಠಿಣ ಶಿಕ್ಷೆ ನೀಡಬೇಕು.
ಅಹಿಂಸೆ ಮತ್ತು ತ್ಯಾಗದ ಪ್ರತಿಪಾದಕರು ಹಾಗೂ ಶಾಂತಿ ಪ್ರಿಯರು ಆಗಿರುವ ಜೈನ ಮುನಿಗಳ ಮೇಲೆ ಇಂತಹ ಕೃತ್ಯಗಳು ಮುಂದೆ ಮರುಕಳಿಸದಂತೆ ರಕ್ಷಣೆ ನೀಡಬೇಕು. ಜೈನ ಬಸದಿಗಳು, ಮಠಗಳು, ಮುನಿಗಳು, ಸಾಧು-ಸಂತರು, ಮಾತಾಜಿಯವರು ವಸ್ತವ್ಯವಿರುವ ಆಶ್ರಮ ಹಾಗೂ ಅವರ ವಿಹಾರ ಸಂದರ್ಭದಲ್ಲಿ ಸೂಕ್ತ ಮುನ್ನೆಚ್ಚರಿಕೆ ಮತ್ತು ಭದ್ರತಾ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಶ್ರೀ ಜೈನ ಮಠದಿಂದ ಆರಂಭವಾದ ಮೆರವಣಿಗೆಗೆ ಯುಗಲ ಮುನಿಗಳಾದ ಮುನಿಶ್ರಿ ಅಮೋಘಕೀರ್ತಿ ಮಹಾರಾಜರು ಹಾಗೂ ಮುನಿಶ್ರಿ ಅಮರಕೀರ್ತಿ ಮಹಾರಾಜರು ಚಾಲನೆ ನೀಡಿದರು. ನಂತರ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಮೌನ ಮೆರವಣಿಗೆ ಮೂಲಕ ನಾಡಕಛೇರಿಗೆ ತೆರಳಿ ಉಪ ತಹಸೀಲ್ದಾರ್ ದೇವರಾಜ್ ರವರಿಗೆ ಮನವಿ ಪತ್ರ ಸಲ್ಲಿಸಿದರು. ಮೆರವಣಿಗೆಯಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಅನುರಾಧ ಲೋಹಿತ್, ಸದಸ್ಯ ಎಸ್.ಬಿ.ಯಶಸ್, ಮಾಜಿ ಅಧ್ಯಕ್ಷ ಎಸ್.ಆರ್.ಲೋಕೇಶ್, ರವಿನಂಜಪ್ಪ, ಮಾಜಿ ಸದಸ್ಯ ಎನ್.ಆರ್.ವಾಸು, ಹಿರಿಯ ಪತ್ರಕರ್ತ ಎಸ್ ಏನ್.ಅಶೋಕ್ ಕುಮಾರ್, ಬಾಹುಬಲಿ ಇಂಜಿನಿಯರ್ ಕಾಲೇಜ್ ಪ್ರಾಂಶುಪಾಲ ಡಾ. ಸುನಿಲ್ ಕುಮಾರ್, ಎಚ್.ಪಿ.ಅಶೋಕ್ ಕುಮಾರ್, ಎಸ್.ಪಿ.ಭಾನುಕುಮಾರ್ , ಶ್ರವಣಬೆಳಗೊಳ ದಿಗಂಬರ ಜೈನ ಸಮಾಜ, ಕೂಷ್ಮಾಂಡಿನಿ ಮಹಿಳಾ ಸಮಾಜ, ನೇಮಿನಾಥ ತೀರ್ಥಂಕರ ಯುವಕ ಸಂಘ, ಎಸ್.ಡಿ.ಜೆ.ಎಂ.ಐ.ಎಂ.ಸಿ. ಟ್ರಸ್ಟ್ ನ ಸದಸ್ಯರು ಹಾಗೂ ಸಿಬ್ಬಂದಿ, ಕ್ಷೇತ್ರದ ಶಾಸ್ತ್ರಿಗಳು ಸೇರಿದಂತೆ ಸಾವಿರಾರು ನಾಗರೀಕರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.