ಹೊಸದಿಗಂತ ಡಿಜಿಟಲ್ ಡೆಸ್ಕ್:
ಯುಎಸ್ ಮಿಲಿಟರಿ ಪತ್ತೇದಾರಿ ವಿಮಾನವು ಉತ್ತರ ಕೊರಿಯಾದ ನಿಯಂತ್ರಿತ ಪ್ರದೇಶದ ವಾಯುಪ್ರದೇಶವನ್ನು ಎಂಟು ಬಾರಿ ಪ್ರವೇಶಿಸಿದೆ ಎಂದು ಉತ್ತರ ಕೊರಿಯಾದ ನಾಯಕ ಕಿಮ್ ಜೊಂಗ್ ಉನ್ ಸಹೋದರಿ ಕಿಮ್ ಯೋ ಜೊಂಗ್ ಹೇಳಿದ್ದಾರೆ.
ಕೂಡಲೇ ಅವರ ದೇಶದ ಯುದ್ಧ ವಿಮಾನಗಳು ಅಮೆರಿಕದ ಬೇಹುಗಾರಿಕಾ ವಿಮಾನವನ್ನು ಓಡಿಸಿರುವುದಾಗಿಯೂ ತಿಳಿಸಿದರು. ಆ ಪ್ರದೇಶದಲ್ಲಿ ಅಮೆರಿಕದ ಕಣ್ಗಾವಲು ಚಟುವಟಿಕೆಗಳು ಮುಂದುವರಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದೂ ಎಚ್ಚರಿಸಿದ್ದಾರೆ. ಉತ್ತರ ಕೊರಿಯಾದ ಸರ್ಕಾರಿ ಮಾಧ್ಯಮದಲ್ಲಿ ಪ್ರಕಟವಾದ ಕಿಮ್ ಸಹೋದರಿ ಯೂ ಜೊಂಗ್ ಅವರ ಕಾಮೆಂಟ್‌ಗಳಿಗೆ ಯುಎಸ್ ಮತ್ತು ದಕ್ಷಿಣ ಕೊರಿಯಾದ ಮಿಲಿಟರಿಗಳು ಇನ್ನೂ ಪ್ರತಿಕ್ರಿಯಿಸಿಲ್ಲ.
ಈ ಹಿಂದೆ ಸಹ ಅಮೆರಿಕ ತನ್ನ ವಾಯುಪ್ರದೇಶಕ್ಕೆ ಪತ್ತೇದಾರಿ ವಿಮಾನಗಳನ್ನು ಹಾರಿಸುತ್ತಿದೆ ಎಂದು ಉತ್ತರ ಕೊರಿಯಾದ ರಕ್ಷಣಾ ಸಚಿವಾಲಯವು ಪ್ರತಿಕ್ರಿಯಿಸಿದೆ. ಅಮೆರಿಕ ತನ್ನ ಕಣ್ಗಾವಲು ಚಟುವಟಿಕೆಗಳನ್ನು ತೀವ್ರಗೊಳಿಸುತ್ತಿದೆ, ಇದು ಉತ್ತರ ಕೊರಿಯಾದ ಸಾರ್ವಭೌಮತ್ವ ಮತ್ತು ಭದ್ರತೆಯನ್ನು ಗಂಭೀರವಾಗಿ ದುರ್ಬಲಗೊಳಿಸುತ್ತಿದೆ ಎಂದಿದೆ.
ಉತ್ತರ ಕೊರಿಯಾದ ವಿಶೇಷ ಆರ್ಥಿಕ ವಲಯಕ್ಕೆ ಪತ್ತೇದಾರಿ ವಿಮಾನವನ್ನು ಯುಎಸ್ ಕಳುಹಿಸಿದೆ ಎಂದು ಕಿಮ್ ಯೋ ಜೊಂಗ್ ಆರೋಪಿಸಿದ್ದಾರೆ. ಅಮೆರಿಕ, ತಮ್ಮ ವಿಶೇಷ ಆರ್ಥಿಕ ವಲಯದ ಮೇಲೆ ಕಣ್ಗಾವಲು ವಿಮಾನಗಳನ್ನು ಹಾರಿಸುವುದನ್ನು ಮುಂದುವರೆಸಿದರೆ ಉತ್ತರ ಕೊರಿಯಾ ನಿರ್ಣಾಯಕ ಕ್ರಮ ತೆಗೆದುಕೊಳ್ಳುತ್ತದೆ ಎಂದು ಕಿಮ್ ಯೋ ಜೊಂಗ್ ಎಚ್ಚರಿಸಿದ್ದಾರೆ.