ಹೊಸದಿಗಂತ ಡಿಜಿಟಲ್ ಡೆಸ್ಕ್:
ಸರ್ಕಾರಿ ದಾಖಲೆಗಳ ನಕಲಿ ಜಾಲವನ್ನು ಬೇಧಿಸಿರುವ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ನೇತೃತ್ವದ ತಂಡ ನಕಲಿ ದಾಖಲೆ, ನಕಲಿ ಸೀಲ್ ಮತ್ತಿತರ ಸೊತ್ತುಗಳನ್ನು ವಶಕ್ಕೆ ತೆಗೆದುಕೊಂಡ ಪ್ರಕರಣ ಮಂಗಳವಾರ ನಡೆದಿದೆ.
ಪುತ್ತೂರಿನ ಪಡೀಲಿನಲ್ಲಿ ಕಾರ್ಯಾಚರಿಸುತ್ತಿದ್ದ ವಿಶ್ವನಾಥ್ ಎಂಬವರಿಗೆ ಸೇರಿದ ಬಿ.ಬಿ. ಇಲೆಕ್ಟಿಕಲ್ಸ್ ಮತ್ತು ಪ್ಲಂಬಿಂಗ್ ಸೆಂಟರಿನಲ್ಲಿ ಈ ಅಕ್ರಮ ಜಾಲವನ್ನು ಪತ್ತೆ ಹಚ್ಚಲಾಗಿದೆ. ಸರ್ಕಾರದಿಂದ ಅನುಮತಿ ಪಡೆದ ಗುತ್ತಿಗೆದಾರರಾಗಿರುವ ವಿಶ್ವನಾಥ್ ಮೆಸ್ಕಾಂನ ಗುತ್ತಿಗೆ ಕಾಮಗಾರಿಗಳನ್ನು ನಿರ್ವಹಿಸುತ್ತಿದ್ದರು.
ವಿದ್ಯುತ್ ಗುತ್ತಿಗೆ ಕಾಮಗಾರಿ ನಿರ್ವಹಿಸುತ್ತಿದ್ದ ಈ ಅಂಗಡಿಯಲ್ಲಿ ಪುತ್ತೂರು ನಗರಸಭೆ, ಕಡಬ ತಾಲೂಕು ಪಂಚಾಯತ್ ಹಾಗೂ ಪುತ್ತೂರು ಹಾಗೂ ಬಂಟ್ವಾಳ ತಾಲೂಕಿನ ಗ್ರಾಮ ಪಂಚಾಯತ್ ಗಳ ಸೀಲ್ ಗಳನ್ನೇ ಹೋಲುವ ನಕಲಿ ಸೀಲ್ ಗಳು ಪತ್ತೆಯಾಗಿವೆ.
ದಾಖಲೆ ಪತ್ರಗಳಿಗೆ ಫೋರ್ಜರಿ ಸಹಿ ಹಾಕಿ ಅದಕ್ಕೆ ನಕಲಿ ಸೀಲ್ ಗಳನ್ನು ಹಾಕಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ತಾ.ಪಂ. ಇಓ ನವೀನ್ ಭಂಡಾರಿ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿ, ಪರಿಶೀಲಿಸಿದಾಗ ವಂಚನೆ ಜಾಲ ಬೆಳಕಿಗೆ ಬಂದಿದೆ. ಮುಂದಿನ ಕ್ರಮ ಕೈಗೊಳ್ಳಲಾಗಿದೆ.