ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ವಿಧಾನಸಭೆ ಕಲಾಪದಲ್ಲಿಂದು (Assembly Session) ವರ್ಗಾವಣೆ ದಂಧೆ ಗದ್ದಲ ಜೋರಾಗಿತ್ತು. ಯತ್ನಾಳ್ ಮಾಡಿದ ಆರೋಪ ಕಾಂಗ್ರೆಸ್-ಬಿಜೆಪಿ (Congress, BJP) ಮಧ್ಯೆ ಮಾತಿನ ಕಿಚ್ಚು ಹಚ್ಚಿತ್ತು. ಮಾತಿನ ಚಕಮಕಿ ಕಲಾಪದಲ್ಲಿ ಕೋಲಾಹಲ ಎಬ್ಬಿಸಿತು.
ವಿಧಾನಸಭೆಯಲ್ಲಿಂದು ಮಾಜಿ ಸಿಎಂ HDK ಗೈರಾಗಿದ್ದರು. ಆದ್ರೂ ವರ್ಗಾವಣೆ ಫೈಟ್ ಜೋರಾಗಿಯೇ ಕಾವೇರಿತ್ತು. ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಹತ್ತಿಸಿದ ವರ್ಗಾವಣೆ ಕಿಡಿಗೆ ಕೆಲ ಗಂಟೆಗಳ ಕಲಾಪ ಉಭಯ ಪಕ್ಷಗಳ ಸದಸ್ಯರ ಜಟಾಪಟಿಗೆ ಬಲಿಯಾಯ್ತು.
ವಿಜಯಪುರ ಪಾಲಿಕೆ ಆಯುಕ್ತರ ಹುದ್ದೆಗೆ ಅನರ್ಹ ಅಧಿಕಾರಿಯನ್ನ ವರ್ಗಾವಣೆ ಮಾಡಲಾಗಿದೆ ಎಂದು ಯತ್ನಾಳ್ ವಿಷಯ ಪ್ರಸ್ತಾಪಿಸಿದರು. ಈ ವೇಳೆ ನಗರಾಭಿವೃದ್ಧಿ ಇಲಾಖೆ ಸಚಿವ ಬೈರತಿ ಸುರೇಶ್ ವಿರುದ್ಧ ಯತ್ನಾಳ್ ವರ್ಗಾವಣೆ ವ್ಯಾಪಾರ ನಡೆಸುತ್ತಿರುವ ಗಂಭೀರ ಆರೋಪ ಮಾಡಿದ್ದರಿಂದ ಸದನದಲ್ಲಿ ಗದ್ದಲ ಶುರುವಾಯಿತು.
ಅಷ್ಟೇ ಅಲ್ಲ ಯತ್ನಾಳ್ ಮಾತಿಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಸಹ ಕಿಡಿಕಾರಿದ್ರು. ಯತ್ನಾಳ್ ನೀವು ಹಿರಿಯರು, ವರ್ಗಾವಣೆ ಬಗ್ಗೆ ಮಾತ್ರ ಮಾತಾಡಿ, ಅದು ಬಿಟ್ಟು ವ್ಯಾಪಾರ ಅಂತೆಲ್ಲ ಏನ್ರಿ ಮಾತಾಡೋದು ಅಂತ ಸಿದ್ದರಾಮಯ್ಯ ಗರಂ ಆಗಿ ಗದರಿದರು. ಇನ್ನು ಡಿಕೆಶಿ ಸಹ, ಯತ್ನಾಳ್ ನೀವು ಮುಖ್ಯಮಂತ್ರಿ ಹುದ್ದೆಗೆ 2,500 ಕೋಟಿ ರೂ., ಮಂತ್ರಿ ಹುದ್ದೆಗೆ 1,000 ಕೋಟಿ ರೂ. ಅಂತೆಲ್ಲಾ ಆರೋಪ ಮಾಡಿದ್ರಿ. ಮಾತಿನ ಮೇಲೆ ಹಿಡಿತವಿರಲಿ, ನಮ್ಮ ಪಕ್ಷದಲ್ಲಿ ಇದ್ದಿದ್ದರೆ, ನಿಮ್ಮನ್ನ 24 ಗಂಟೆಯಲ್ಲಿ ವಜಾ ಮಾಡ್ತಿದ್ದೆ ಅಂತ ಕಿಡಿಕಾರಿದ್ರು. ಈ ವೇಳೆ ಯತ್ನಾಳ್ ಪರ ಮಾಜಿ ಸಿಎಂ ಬೊಮ್ಮಾಯಿ ಸಮರ್ಥಿಸಿಕೊಂಡ್ರು. ಉಭಯ ಪಕ್ಷಗಳ ಸದಸ್ಯರ ನಡುವೆ ಭಾರೀ ಜಟಾಪಟಿ ನಡೀತು.
ಬೈರತಿ ಸುರೇಶ್ ಕ್ಷಮೆಗೆ ಆಗ್ರಹಿಸಿ ಬಿಜೆಪಿ ಸದಸ್ಯರು ಸದನದ ಬಾವಿಗೆ ಇಳಿದು ಧರಣಿ ನಡೆಸಿದ್ರು. ಸ್ಪೀಕರ್ ಅನಿವಾರ್ಯವಾಗಿ ಸದನವನ್ನ ಹತ್ತು ನಿಮಿಷ ಕಾಲ ಮುಂದೂಡಿದರು. ಬಳಿಕ ಸ್ಪೀಕರ್ ನೇತೃತ್ವದಲ್ಲಿ ಸಂಧಾನ ಸಭೆ ನಡೆಸಲಾಯ್ತು.
ಆದ್ರೆ ಮತ್ತೆ ಕಲಾಪ ಆರಂಭವಾದಾಗಜಟಾಪಟಿ ನಡೀತು. ಈ ವೇಳೆ ಸಿದ್ದರಾಮಯ್ಯ ಸಲಹೆ ಮೇರೆಗೆ ಉಭಯ ಕಡೆಯಿಂದಲೂ ವಿಷಾದ ವ್ಯಕ್ತಪಡಿಸಿ ಗದ್ದಲಕ್ಕೆ ಬ್ರೇಕ್ ಹಾಕಲಾಯ್ತು.