March 5, 2026
Thursday, March 5, 2026
spot_img

60 ಕೋಟಿ ರೂ. ವಂಚನೆ ಕೇಸ್‌: ಕೊನೆಗೂ ಮೌನ ಮುರಿದ ಶಿಲ್ಪಾ ಶೆಟ್ಟಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ಅವರ ಬೆಂಗಳೂರಿನಲ್ಲಿರುವ ಬಾಸ್ಟಿಯನ್ ಗಾರ್ಡನ್ ಸಿಟಿ ಪಬ್ ಸೇರಿದಂತೆ ಇತರೆ ಸ್ಥಳಗಳಲ್ಲಿ ಐಟಿ ಅಧಿಕಾರಿಗಳು ದಾಳಿ ಮಾಡಿದ್ದರು. ಮುಂಬೈನ ಜುಹು ಪ್ರದೇಶದಲ್ಲಿರುವ ಅವರ ಮನೆ ಮಾತ್ರವಲ್ಲದೆ, ಶಿಲ್ಪಾಗೆ ಸಂಬಂಧಿಸಿದ ಇತರೆ ಸ್ಥಳಗಳಲ್ಲಿಯೂ ಐಟಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿದ್ದರು. ಇದೀಗ ದಾಳಿ ಬಗ್ಗೆ ಶಿಲ್ಪಾ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.

ಶಿಲ್ಪಾ ಶೆಟ್ಟಿ ಅವರ ಕುಟುಂಬದ ಮೇಲೆ ಮೇಲೆ ಮುಂಬೈ ಮೂಲದ ಉದ್ಯಮಿ ದೀಪಕ್ ಕೊಠಾರಿ ಅವರು 60 ಕೋಟಿ ರೂಪಾಯಿ ವಂಚನೆ ಆರೋಪ ಮಾಡಿದ್ದರು. ಈ ದಂಪತಿಯಿಂದ ತಮಗೆ ವಂಚನೆ ಆಗಿದೆ ಎಂದು ದೀಪಕ್ ಕೊಠಾರಿ ದೂರು ನೀಡಿದ್ದರು. ಈ ದೂರು ದಾಖಲಾದ ಬೆನ್ನಲ್ಲೇ ಐಟಿ ಅಧಿಕಾರಿಗಳು ದಾಳಿ ಮಾಡಿದ್ದರು.

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಶಿಲ್ಪಾ ಶೆಟ್ಟಿ ಅವರು, “ಸುಮಾರು 9 ವರ್ಷಗಳ ವಿಳಂಬದ ನಂತರ, ನನ್ನ ಮೇಲೆ ಈ ಕ್ರಿಮಿನಲ್ ಕೇಸ್‌ ಅನ್ನು ಹೊರಿಸಲು ಮಾಡುತ್ತಿರುವ ಈ ಕುತಂತ್ರದ ಪ್ರಯತ್ನವು ಕಾನೂನುಬದ್ಧವಾಗಿ ನಿಲ್ಲುವಂಥದ್ದಲ್ಲ. ಇದು ಕಾನೂನಿನ ಸ್ಥಾಪಿತ ತತ್ವಗಳಿಗೆ ವಿರುದ್ಧವಾಗಿದೆ” ಎಂದಿದ್ದಾರೆ.

ಈ ವಿಷಯಕ್ಕೆ ನನ್ನ ಹೆಸರನ್ನು ತಳುಕು ಹಾಕುವ ಆಧಾರರಹಿತ ಪ್ರಯತ್ನದಿಂದ ನನಗೆ ತೀವ್ರ ಬೇಸರವಾಗಿದೆ. ಆ ಕಂಪನಿಯೊಂದಿಗೆ ನನ್ನ ಸಂಬಂಧವು ಕೇವಲ ‘ಕಾರ್ಯನಿರ್ವಾಹಕೇತರ’ ಸಾಮರ್ಥ್ಯಕ್ಕೆ ಸೀಮಿತವಾಗಿತ್ತು. ಅದರ ಕಾರ್ಯಾಚರಣೆ, ಹಣಕಾಸು, ನಿರ್ಧಾರ ತೆಗೆದುಕೊಳ್ಳುವಿಕೆ ಅಥವಾ ಯಾವುದೇ ಸಹಿ ಮಾಡುವ ಅಧಿಕಾರದಲ್ಲಿ ನನ್ನ ಪಾತ್ರವಿರಲಿಲ್ಲ. ವಾಸ್ತವವಾಗಿ, ಇತರ ಹಲವಾರು ಸಾರ್ವಜನಿಕ ವ್ಯಕ್ತಿಗಳಂತೆ ನಾನು ಕೂಡ ಆ ಹೋಮ್ ಶಾಪಿಂಗ್ ಚಾನೆಲ್‌ನ ಕೆಲವು ಉತ್ಪನ್ನಗಳನ್ನು ವೃತ್ತಿಪರ ನೆಲೆಯಲ್ಲಿ ಪ್ರಚಾರ ಮಾಡಿದ್ದೆ ಅಷ್ಟೆ. ಅದಕ್ಕಾಗಿ ನನಗೆ ಬರಬೇಕಾದ ಸಂಭಾವನೆಯೂ ಇನ್ನು ಬಾಕಿ ಉಳಿದಿದೆ ಎಂದು ಅವರು ತಿಳಿಸಿದ್ದಾರೆ.

ಈ ಕಾನೂನು ಪ್ರಕ್ರಿಯೆಗಳಲ್ಲಿ ತಮ್ಮ ಹೆಸರನ್ನು ಎಳೆದು ತರುತ್ತಿರುವುದು ಬೇಸರ ಮೂಡಿಸಿದೆ ಮತ್ತು ಇದು ಸಮರ್ಥನೀಯವಲ್ಲದ್ದು. ಇಂತಹ ಅನಗತ್ಯ ಆರೋಪಗಳಿಂದ ಸತ್ಯಾಂಶಗಳನ್ನು ತಪ್ಪಾಗಿ ಬಿಂಬಿಸುವುದಲ್ಲದೆ, ಸಾರ್ವಜನಿಕ ವಲಯದಲ್ಲಿ ಮಹಿಳೆಯ ಘನತೆ, ಸಮಗ್ರತೆ ಮತ್ತು ಗೌರವವನ್ನು ಅನ್ಯಾಯವಾಗಿ ತುಳಿಯುವಂತೆ ಮಾಡುತ್ತವೆ ಎಂದು ಶಿಲ್ಪಾ ಶೆಟ್ಟಿ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಪ್ರಕರಣವು ಈಗ ಕಾರ್ಯನಿರ್ವಹಿಸದ ಬೆಸ್ಟ್ ಡೀಲ್ ಟಿವಿ ಪ್ರೈವೇಟ್ ಲಿಮಿಟೆಡ್ ಎಂಬ ಶಾಪಿಂಗ್ ಮತ್ತು ಆನ್‌ಲೈನ್ ವೇದಿಕೆಗೆ ಸಂಬಂಧಿಸಿದ್ದು, ಇದರಲ್ಲಿನ ಸಾಲ ಮತ್ತು ಹೂಡಿಕೆ ಒಪ್ಪಂದದಲ್ಲಿ ಕಂಪನಿಯ ನಿರ್ದೇಶಕರಾದ ಈ ದಂಪತಿಗಳು ಸುಮಾರು 60 ಕೋಟಿ ರೂಪಾಯಿಗಳನ್ನು ವಂಚಿಸಿದ್ದಾರೆ ಎಂದು ಕೊಠಾರಿ ಆಗಸ್ಟ್‌ನಲ್ಲಿ ಪೊಲೀಸ್ ನೀಡಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !