November 4, 2026
Wednesday, November 4, 2026
spot_img

‘ಸ್ತ್ರೀ 2’ ಸೂಪರ್ ಹಿಟ್ ಆದರೂ ಸಾಲು ಸಾಲು ಸಿನಿಮಾಗಳನ್ನು ತಿರಸ್ಕರಿಸಿದ ಶ್ರದ್ಧಾ ಕಪೂರ್: ಕಾರಣ ಬಿಚ್ಚಿಟ್ಟ ನಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಾಲಿವುಡ್‌ನ ಬ್ಲಾಕ್‌ಬಸ್ಟರ್ ಸಿನಿಮಾ ‘ಸ್ತ್ರೀ 2’ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ ನಂತರ ನಟಿ ಶ್ರದ್ಧಾ ಕಪೂರ್ ಬೆಳ್ಳಿಪರದೆಯಿಂದ ಸುಮಾರು ಮೂರು ವರ್ಷಗಳ ಕಾಲ ದೂರ ಉಳಿದಿದ್ದರು. ಇದೀಗ ಅವರ ಬಹುನಿರೀಕ್ಷಿತ ‘ಈಥಾ’ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಚಿತ್ರಮಂದಿರಗಳಲ್ಲಿ ಶ್ರದ್ಧಾ ಅವರನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

ಈ ನಡುವೆ ಇನ್‌ಸ್ಟಾಗ್ರಾಮ್‌ನಲ್ಲಿ ಅಭಿಮಾನಿಗಳೊಂದಿಗೆ ನಡೆಸಿದ ‘ಆಸ್ಕ್ ಮಿ ಎನಿಥಿಂಗ್’ ಸಂವಾದದಲ್ಲಿ, ತಾವು ಇಷ್ಟು ದಿನ ಸಿನಿಮಾಗಳಿಂದ ದೂರ ಉಳಿಯಲು ಮತ್ತು ಹೊಸ ಚಿತ್ರಗಳಿಗೆ ಸಹಿ ಹಾಕದಿರಲು ಇದ್ದ ಅಸಲಿ ಕಾರಣವನ್ನು ಶ್ರದ್ಧಾ ಬಿಚ್ಚಿಟ್ಟಿದ್ದಾರೆ.

‘ಸ್ತ್ರೀ 2’ ಸೂಪರ್ ಹಿಟ್ ಆದ ತಕ್ಷಣ ತಮಗೆ ದೊಡ್ಡ ಮೊತ್ತದ ಸಂಭಾವನೆಯೊಂದಿಗೆ ಸಾಲು ಸಾಲು ಸಿನಿಮಾಗಳ ಆಫರ್‌ಗಳು ಹುಡುಕಿಕೊಂಡು ಬಂದಿದ್ದವು ಎಂದು ಶ್ರದ್ಧಾ ಬಹಿರಂಗಪಡಿಸಿದ್ದಾರೆ. ಆದರೆ, ತಮಗೆ ಸಂಪೂರ್ಣವಾಗಿ ಇಷ್ಟವಾಗುವ ಕಥೆ ಸಿಗುವವರೆಗೂ ಯಾವುದೇ ಸಿನಿಮಾವನ್ನು ಒಪ್ಪಿಕೊಳ್ಳಬಾರದು ಎಂದು ಅವರು ದೃಢ ನಿರ್ಧಾರ ಮಾಡಿದ್ದರು. “ಯುವತಿಯರು ತಮ್ಮ ವೃತ್ತಿಜೀವನದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಹೇಗೆ?” ಎಂದು ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶ್ರದ್ಧಾ, ಈ ಸ್ಫೂರ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ.

“ಸ್ತ್ರೀ 2 ನಂತರ ನನಗೆ ಭಾರೀ ಸಂಭಾವನೆ ಹಾಗೂ ಸಾಕಷ್ಟು ಸಿನಿಮಾಗಳ ಆಫರ್ ಬಂದಿದ್ದವು. ಆದರೆ ಪರಿಪೂರ್ಣ ಕಥೆ ಸಿಗುವವರೆಗೂ ಯಾವುದಕ್ಕೂ ಸಹಿ ಹಾಕಬಾರದು ಎಂದು ನಿರ್ಧರಿಸಿದ್ದೆ. ನನ್ನ ಹೃದಯವು ತಾಳ್ಮೆಯಿಂದ ಇರುವಂತೆ ಹೇಳಿತು, ನಾನು ಅದನ್ನೇ ಮಾಡಿದೆ. ನಾವು ಅತಿಯಾಗಿ ಬಯಸುವ ವಿಷಯಕ್ಕಾಗಿ ಕಾಯುವುದು ಖಂಡಿತವಾಗಿಯೂ ಕಷ್ಟ. ಆದರೆ ಇಂದು ಆ ಕಾಯುವಿಕೆಯ ನಿರ್ಧಾರದ ಬಗ್ಗೆ ನನಗೆ ಹೆಮ್ಮೆ ಇದೆ. ಆದ್ದರಿಂದ ನಿಮ್ಮ ಹೃದಯದ ಸಣ್ಣ ಧ್ವನಿಯನ್ನು ಆಲಿಸಿ, ಕೆಲವೊಮ್ಮೆ ಅದು ಕಷ್ಟ ಎನಿಸಿದರೂ ಅಂತಿಮವಾಗಿ ಅದಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ” ಎಂದು ಶ್ರದ್ಧಾ ಕಪೂರ್ ಹೇಳಿದ್ದಾರೆ.

ನಟಿಯಾಗದಿದ್ದರೆ ಸೈಕಾಲಜಿಸ್ಟ್ ಆಗುತ್ತಿದ್ದೆ

ಇದೇ ವೇಳೆ, “ಒಂದು ವೇಳೆ ನೀವು ನಟಿಯಾಗದಿದ್ದರೆ ಏನಾಗುತ್ತಿದ್ದಿರಿ?” ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ನಾನು ಜನರ ರಹಸ್ಯಗಳನ್ನು ಚೆನ್ನಾಗಿ ಗೌಪ್ಯವಾಗಿಡಬಲ್ಲೆ. ಹಾಗಾಗಿ ನಟಿಯಾಗದಿದ್ದರೆ ಒಬ್ಬ ಒಳ್ಳೆಯ ಸೈಕಾಲಜಿಸ್ಟ್ ಆಗುತ್ತಿದ್ದೆನೇನೋ. ಆದರೆ ಜನರ ಸಮಸ್ಯೆಗಳನ್ನು ಪರಿಹರಿಸಲು ನನ್ನಿಂದ ಸಾಧ್ಯವಾಗುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ನನ್ನ ಕೌನ್ಸೆಲಿಂಗ್‌ಗೆ ಬಂದವರು ಇದ್ದ ಆತಂಕಕ್ಕಿಂತ ಹೆಚ್ಚಿನ ಆತಂಕದೊಂದಿಗೆ ಹೊರಹೋಗುತ್ತಿದ್ದರೇನೋ!” ಎಂದು ತಮಾಷೆ ಮಾಡಿದ್ದಾರೆ. ಈ ಕಾರಣಕ್ಕಾಗಿಯೇ ತಮಗೆ ನಟನೆ ಸೂಕ್ತವಾದ ಆಯ್ಕೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಡಿಸೆಂಬರ್ 4 ರಂದು ‘ಈಥಾ’ ಬಿಡುಗಡೆ

ಲಕ್ಷ್ಮಣ್ ಉತೇಕರ್ ನಿರ್ದೇಶನದ ಶ್ರದ್ಧಾ ಕಪೂರ್ ಅವರ ಮುಂಬರುವ ‘ಈಥಾ’ ಚಿತ್ರವು ತಮಾಷಾ ಮತ್ತು ಲಾವಣಿ ನೃತ್ಯದ ಮೂಲಕ ಜಗತ್ಪ್ರಸಿದ್ಧರಾಗಿದ್ದ ಮರಾಠಿ ಜಾನಪದ ಕಲಾವಿದೆ ವಿಠಾಬಾಯಿ ನಾರಾಯಣಗಾಂವ್ಕರ್ ಅವರ ಜೀವನಾಧಾರಿತ ಸಿನಿಮಾವಾಗಿದೆ. ಈ ಚಿತ್ರವು ಡಿಸೆಂಬರ್ 4 ರಂದು ತೆರೆಕಾಣಲಿದ್ದು, ಚಿತ್ರದಲ್ಲಿ ರಣದೀಪ್ ಹೂಡಾ, ಮೊಹಮ್ಮದ್ ಜೀಶನ್ ಅಯೂಬ್ ಮತ್ತು ಸಿದ್ಧಾರ್ಥ್ ಜಾಧವ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Must Read

Skip to toolbar