ಹೊಸದಿಗಂತ ಡಿಜಿಟಲ್ ಡೆಸ್ಕ್:
ಯುಮುನೆಯ ಕೋಪಕ್ಕೆ ರಾಷ್ಟ್ರ ರಾಜಧಾನಿ ದೆಹಲಿ ತತ್ತರಿಸಿದೆ. ಯಮುನಾ ನದಿಯ ಹರಿವು ಅತ್ಯಂತ ಭಯಾನಕವಾಗಿದೆ.ಬುಧವಾರ ರಾತ್ರಿಯವರೆಗೆ ಯುಮಾನ ನೀರಿನ ಮಟ್ಟ 208.05 ಮೀಟರ್ ತಲುಪಿದ್ದು, ಗುರುವಾರದಂದು ನದಿಯ ನೀರಿನ ಮಟ್ಟ 208.46 ಮೀಟರ್‌ಗಳಷ್ಟಿದ್ದು ಬೆಳಗ್ಗೆ 7 ಗಂಟೆಯ ವೇಳೆಗೆ ಪ್ರವಾಹದ ಪ್ರಮಾಣ ಹೆಚ್ಚಾಗಿತ್ತು. ಸದ್ಯ ನೀರಿನ ಮಟ್ಟ ಅಪಾಯಕಾರಿ ಮಟ್ಟಕ್ಕಿಂತ ಮೂರು ಮೀಟರ್ ಮೇಲಿದೆ ಇದೆ.
ಸಿವಿಲ್ ಲೈನ್ಸ್ ಪ್ರದೇಶದ ರಿಂಗ್ ರಸ್ತೆಯು ಜಲಾವೃತಗೊಂಡಿದ್ದು, ಕಾಶ್ಮೀರಿ ಗೇಟ್ ISBT ಯೊಂದಿಗೆ ಮಜ್ನು ಕಾ ತಿಲಾವನ್ನು ಸಂಪರ್ಕಿಸುವ ರಸ್ತೆಯೂ ನೀರಿನೊಳಗೆ ಮುಳುಗಿದೆ. ಈ ಸ್ಥಳವು ಮುಖ್ಯಮಂತ್ರಿ ಕೇಜ್ರಿವಾಲ್ ಮತ್ತು ದೆಹಲಿ ವಿಧಾನಸಭೆಯಿಂದ ಕೇವಲ 500 ಮೀಟರ್ ದೂರದಲ್ಲಿದೆ.
ನೀರಿನ ಮಟ್ಟ ಏರಿಕೆಯಿಂದಾಗಿ ಮೂರು ನೀರು ಶುದ್ಧೀಕರಣ ಘಟಕಗಳನ್ನು ಮುಚ್ಚಲಾಗಿದೆ. ಇದರಿಂದ ರಾಷ್ಟ್ರ ರಾಜಧಾನಿಯ ಕುಡಿಯುವ ನೀರು ಪೂರೈಕೆಗೆ ಹೊಡೆತ ಬೀಳಬಹುದು. ಜಲಾವೃತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರಿ ಮತ್ತು ಖಾಸಗಿ ಎಲ್ಲಾ ಶಾಲೆಗಳನ್ನು ಮುಚ್ಚಲಾಗಿದೆ ಎಂದು ಮುಖ್ಯಮಂತ್ರಿ ಕೇಜ್ರಿವಾಲ್ ಇಂದು ಬೆಳಿಗ್ಗೆ ಘೋಷಿಸಿದರು.
ಜಲಾವೃತ ಪ್ರದೇಶಗಳಿಂದ ದೂರವಿರಲು ಜನರನ್ನು ವಿನಂತಿಸಿದ ಮುಖ್ಯಮಂತ್ರಿ ಇಂದು ಬೆಳಿಗ್ಗೆ ಆಡಳಿತವು ಜಲಾವೃತ ಪ್ರದೇಶಗಳನ್ನು ಖಾಲಿ ಮಾಡುತ್ತಿದೆ ಮತ್ತು ಸ್ಥಳಾಂತರಿಸಲು ನಾಗರಿಕರ ಸಹಕಾರವನ್ನು ಕೋರಿದರು. “ಜೀವವನ್ನು ಉಳಿಸುವುದು ಅತ್ಯಂತ ಮುಖ್ಯ. ಈ ತುರ್ತು ಪರಿಸ್ಥಿತಿಯಲ್ಲಿ ಪರಸ್ಪರ ಸಹಾಯ ಮಾಡಲು ನಾನು ಎಲ್ಲಾ ದೆಹಲಿಯವರಿಗೆ ಮನವಿ ಮಾಡುತ್ತೇನೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಹರಿಯಾಣ ಬ್ಯಾರೇಜ್‌ನಿಂದ ನೀರಿನ ಹರಿವು ಮಧ್ಯಾಹ್ನ 2 ಗಂಟೆಯ ನಂತರ ಇಳಿಯುವ ನಿರೀಕ್ಷೆಯಿದೆ ಎಂದು ಕೇಂದ್ರ ಜಲ ಆಯೋಗ ತಿಳಿಸಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ 12 ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ.