ಹೊಸದಿಗಂತ ವರದಿ ಹುಬ್ಬಳ್ಳಿ:
ಹಿಂದಿನ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಎಪಿಎಂಸಿ ಕಾಯ್ದೆ ಸೇರಿ ವಿವಿಧ ರೈತ ಜನಪ್ರಿಯ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ರದ್ದು ಪಡಿಸಿ, ರೈತ ವಿರೋಧಿ ನೀತಿಗಳ ಪರ ನಿಂತಿದೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಷಣ್ಮುಖ ಗುರಿಕಾರ ಅಸಮಾಧಾನ ವ್ಯಕ್ತಪಡಿಸಿದರು.
ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಪಿಎಂಸಿ ಕಾಯ್ದೆಯಿಂದ ರೈತರು ಬೆಳೆದ ಬೆಳೆಗಳನ್ನು ಎಲ್ಲಾದರೂ ಮಾರಾಟ ಮಾಡುವ ಸ್ವಾತಂತ್ರ್ಯವಿತ್ತು. ಸಾಗಾಣಿಕೆ ಹಾಗೂ ದಲ್ಲಾಳಿ ಖರ್ಚು ಉಳಿತಾಯವಾಗುತ್ತಿತ್ತು ಎಂದರು.
ವಿದ್ಯುತ್ ದರ ಹೆಚ್ಚಿಸಿದ್ದರಿಂದ ಕೈಗಾರಿಕೆ, ರೈಸ್ ಮಿಲ್ ಸೇರಿ ಸಣ್ಣ ಕೈಗಾರಿಕೆಗಳಿಗೆ ಆರ್ಥಿಕ ಹೊರೆ ಬಿದ್ದಿದೆ. ಸರ್ಕಾರ ಇವುಗಳ ಉಳಿವಿಗೆ ವಿದ್ಯುತ್ ದರ ಕಡಿಮೆ ಮಾಡಬೇಕು ಎಂದು ಒತ್ತಾಯಿಸಿದರು.
ರೈತರ ಮಕ್ಕಳ ವಿದ್ಯಾನಿಧಿ ಯೋಜನೆ ರದ್ದು ಪಡಿಸಿ, ಬಡ ರೈತರ ಮಕ್ಕಳಿಗೆ ಸರ್ಕಾರದ ಅನ್ಯಾಯ ಮಾಡಿದೆ. ಗೋಹತ್ಯೆ ಹಾಗೂ ಜಾನುವಾರು ಸರಂಕ್ಷಿಸಲು ಪ್ರತಿ ಜಿಲ್ಲೆಗೆ ಗೋಶಾಲೆ ಆರಂಭಿಸಲಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಅದನ್ನು ರದ್ದುಪಡಿಸಿ ಗೋ ಹಂತಕರಿಗೆ ದಾರಿ ಮಾಡಿ ಕೊಟ್ಟಿದೆ ಎಂದು ಹರಿಹಾಯ್ದರು.
ಇನ್ನೂ ಭೂ ಸಿರಿ, ಕಿಸಾನ್ ಸನ್ಮಾನ, ರೈತ ಶಕ್ತಿ, ಕೃಷಿ ಭೂಮಿ ಮಾರಾಟ ಕಾಯ್ದೆ ರದ್ದು ಪಡಿಸಿದ್ದು, ನಿರಾವರಿ ಯೋಜನೆ ಸಂಪೂರ್ಣ ನಿರ್ಲಕ್ಷ್ಯ ಮಾಡಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಧಾರವಾಡ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಕುಂದಗೋಳಮಠ, ರೈತ ಮೋರ್ಚಾ ಗ್ರಾಮಾಂತರ ಘಟಕದ ಅಧ್ಯಕ್ಷ ರಾಘವೇಂದ್ರ ಪಾಟೀಲ ಸೇರಿದಂತೆ ಅನೇಕರಿದ್ದರು.